(ನ್ಯೂಸ್ ಕಡಬ) newskadaba.com.ಬೆಂಗಳೂರು, ಫೆ.21. ಹೊಸೂರು ಮತ್ತು ಬೆಂಗಳೂರು ನಡುವೆ ಮೆಟ್ರೊ ಸಂಪರ್ಕ ಕಲ್ಪಿಸುವಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಚೆನ್ನೈ ಮೆಟ್ರೊ ರೈಲು ನಿಗಮವು ಬೊಮ್ಮಸಂದ್ರದಿಂದ ರೈಲು ಸಂಪರ್ಕ ನಿರ್ಮಾಣಕ್ಕೆ ಕಾರ್ಯಸಾಧ್ಯತೆ ಅಧ್ಯಯನ ನಡೆಸಲು ಅನುಮತಿ ಕೋರಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದೆ.
ಸಚಿವಾಲಯ ಪ್ರಸ್ತಾವನೆಯನ್ನು ಅನುಮೋದಿಸಿದ ನಂತರ ಸಿಎಂಆರ್‌ಎಲ್, ಹೊಸೂರಿನಿಂದ ಕರ್ನಾಟಕದ ಬೊಮ್ಮಸಂದ್ರದವರೆಗಿನ 20.5 ಕಿ.ಮೀ. ಉದ್ದದ ಮೆಟ್ರೊ ರೈಲು ಸಂಪರ್ಕದ ನಿರ್ಮಾಣದ ಅಧ್ಯಯನ ನಡೆಸಲು ಟೆಂಡರ್ ಕರೆಯಲಿದೆ. ತಮಿಳುನಾಡು ಸರಕಾರ ಸಿಎಂಆರ್‌ಎಲ್‌ಗೆ 75 ಲಕ್ಷ ರೂಪಾಯಿ ಮಂಜೂರು ಮಾಡಿ ಕಾರ್ಯ ಸಾಧ್ಯತೆ ಅಧ್ಯಯನ ನಡೆಸುವಂತೆ ಸೂಚಿಸಿತ್ತು. ಬಿಎಂಆರ್‌ಸಿಎಲ್‌ಗೆ ಈ ಮೆಟ್ರೊ ಯೋಜನೆಯನ್ನು ಬೊಮ್ಮಸಂದ್ರದಿಂದ ಹೊಸೂರುವರೆಗೆ ವಿಸ್ತರಿಸಲು ಕರ್ನಾಟಕ ಸರಕಾರವು ಈಗಾಗಲೇ ಅನುಮೋದನೆ ನೀಡಿ 2022 ರಲ್ಲಿ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿತ್ತು.