(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.24. ತುಳುನಾಡಿನ ಜನಪ್ರಿಯ ಭಾಷೆಯಾದ ತುಳುವನ್ನು ಕೇವಲ ಮೂರು ತಿಂಗಳಲ್ಲಿ ಕಲಿತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿಯವರು ಮಾದರಿಯಾಗಿದ್ದಾರೆ.
ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರಾದ ಸುಧೀರ್ ಕುಮಾರ್ ರೆಡ್ಡಿಯವರು ಕಳೆದ ಆರು ತಿಂಗಳ ಹಿಂದೆ ಜಿಲ್ಲಾ ಎಸ್ಪಿಯಾಗಿ ಅಧಿಕಾರ ಸ್ವೀಕರಿಸುವಾಗ ತೆಲುಗು, ತಮಿಳು, ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಗಳಲ್ಲಿ ಪರಿಣತಿಯನ್ನು ಹೊಂದಿದ್ದರು. ಆದರೆ ಕೆಲವು ಹಿರಿಯರು ಕನ್ನಡ ಭಾಷೆ ಮಾತನಾಡಲಾಗದೆ ತಮ್ಮ ಸಮಸ್ಯೆಗಳನ್ನು ತಿಳಿಸಲು ಚಡಪಡಿಸುತ್ತಿದ್ದುದನ್ನು ಕಂಡು ಸ್ಥಳೀಯ ಭಾಷೆಯಾದ ತುಳುವನ್ನು ತಾನೂ ಕಲಿಯಬೇಕೆಂದು ತೀರ್ಮಾನಿಸಿದ ಎಸ್ಪಿಯವರು ಸಮಸ್ಯೆಗಳನ್ನು ಹೇಳಿಕೊಂಡು ಕಛೇರಿಗೆ ಆಗಮಿಸುವ ನೊಂದವರಲ್ಲಿ, ತನ್ನ ಇಲಾಖಾ ಸಿಬ್ಬಂದಿಗಳಲ್ಲಿ ತುಳುವಿನಲ್ಲಿಯೇ ಮಾತನಾಡಲು ಪ್ರಾರಂಭಿಸಿದರು. ಆ ಮೂಲಕ ತನ್ನ ಕಾರ್ಯವ್ಯಾಪ್ತಿಯಲ್ಲಿ ನಡೆಯುವ ಕೆಲವು ಅಪರಾಧ ಕೃತ್ಯಗಳ ತನಿಖೆಗೂ ಸಹಕಾರಿಯಾಗಬಹುದು ಎನ್ನುವುದು ಎಸ್ಪಿಯವರ ಅಭಿಮತ. ಅಲ್ಲದೆ ತಾನು ತುಳು ಮಾತನಾಡುವುದರ ಮಧ್ಯೆ ‘ಪಾತೆರಡ್ ತಪ್ಪು ಇತ್ತ್ಂಡ ಪನ್ಲೆ’ ಎಂದು ವಿನಯತೆಯಿಂದಲೇ ಹೇಳುತ್ತಾರೆ.
ವಿಶೇಷವೆಂದರೆ ಜಿಲ್ಲೆಗೆ ಕಾಲಿಟ್ಟು ಕೇವಲ ಆರೇ ಆರು ತಿಂಗಳಲ್ಲಿ ಮೂರು ತಿಂಗಳ ಅಂತರದಲ್ಲಿ ತುಳು ಭಾಷೆಯ ಮೇಲೆ ಅಭಿಮಾನವಿಟ್ಟು ತುಳು ಭಾಷೆ ಕಲಿತ ಪ್ರಥಮ ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿಯವರು ಕಳೆದ ಹಲವಾರು ವರ್ಷಗಳಿಂದ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ತುಳು ಭಾಷೆ ಕಲಿಯದೆ ಇರುವ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ.
ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿನ ಭಾಷೆಯನ್ನು ಕಲಿತಾಗ ಮಾತ್ರ ಜನರ ಸಮಸ್ಯೆಗಳನ್ನು ಅರ್ಥೈಸಲು ಸಾಧ್ಯವಾಗುತ್ತದೆ. ಅದರಂತೆ ನಾನು ತುಳುನಾಡಿನ ಪ್ರಮುಖ ಭಾಷೆಯಾದ ತುಳುವನ್ನು ಕಲಿತಿದ್ದೇನೆ ಎಂದು ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿಯವರು ‘ನ್ಯೂಸ್ ಕಡಬ’ಕ್ಕೆ ಪ್ರತಿಕ್ರಿಯಿಸಿದ್ದಾರೆ.