(ನ್ಯೂಸ್ ಕಡಬ)newskadaba.com.ಬೆಂಗಳೂರು. ಫೆ.10. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೆಬ್ರವರಿ 17 ರಂದು ಮಂಡಿಸಲಿರುವ ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಹೊಸ ಕೃಷಿ ನೀತಿಯನ್ನು ಘೋಷಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಈ ನೀತಿಯು ನೈಸರ್ಗಿಕ ಕೃಷಿಯ ಮೂಲಕ ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಳ್ಳಲು, ಸುಧಾರಿಸಲು ಮತ್ತು ರಾಗಿ ಬೆಳೆಯಲು ರೈತರನ್ನು ಉತ್ತೇಜಿಸುತ್ತದೆ ಎಂದು ತಿಳಿದುಬಂದಿದೆ.
ಬೊಮ್ಮಾಯಿ ಅವರು ಕಳೆದ ವರ್ಷ ಮಂಡಿಸಿದ ಚೊಚ್ಚಲ ಬಜೆಟ್‌ನಲ್ಲಿ ಕೃಷಿ ಮತ್ತು ಸಂಬಂಧಿತ ವಲಯಗಳಿಗೆ 33,700 ಕೋಟಿ ರೂ ಮೀಸಲಿಟ್ಟಿದ್ದರು. ರೈತ ಶಕ್ತಿ ಸೇರಿದಂತೆ ರೈತರಿಗೆ ಯಂತ್ರೋಪಕರಣಗಳನ್ನು ಖರೀದಿಸಲು ಆರ್ಥಿಕ ನೆರವು ನೀಡಲಾಗುವುದು ಎಂದು ಘೋಷಿಸಿದ್ದರು. ಗರಿಷ್ಠ 5 ಎಕರೆಗೆ ಒಳಪಟ್ಟು ಎಕರೆಗೆ 250 ರೂಪಾಯಿ ಡೀಸೆಲ್ ಸಬ್ಸಿಡಿಯನ್ನೂ ಘೋಷಿಸಿದ್ದರು.
ಈ ಬಾರಿಯ ಬಜೆಟ್‌ನಲ್ಲಿ ರೈತರಿಗೆ ಆದ್ಯತೆ ನೀಡಲಾಗುವುದು ಎಂದು ಬೊಮ್ಮಾಯಿ ಇತ್ತೀಚೆಗೆ ಘೋಷಿಸಿದ್ದರು. ಇತ್ತೀಚಿನ ಕೇಂದ್ರ ಬಜೆಟ್‌ನಲ್ಲಿ ರೈತರಿಗೆ 1.25 ಲಕ್ಷ ಕೋಟಿ ರೂ ಮೀಸಲಿಡಲಾಗಿತ್ತು. ಕೇಂದ್ರ ಬಜೆಟ್‌ನಲ್ಲಿ ಮಧ್ಯ ಕರ್ನಾಟಕದ ಭೂಮಿಗೆ ನೀರಾವರಿಗೆ ಸಹಾಯ ಮಾಡುವ ಬಹು ನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.
ಮಣ್ಣಿನ ಗುಣಮಟ್ಟಕ್ಕೆ ಒತ್ತು ನೀಡುವ ಕರ್ನಾಟಕ ಕೃಷಿ ನೀತಿಯನ್ನು ಪ್ರಕಟಿಸಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಬಲ್ಲ ಮೂಲಗಳು ಮಾಹಿತಿ ನೀಡಿವೆ.