(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.23. ಇಲ್ಲಿಗೆ ಸಮೀಪದ ಕೆದಿಲ ದೈವಸ್ಥಾನದ ಬಳಿಯ ಮನೆಯೊಂದಕ್ಕೆ ನುಗ್ಗಿರುವ ಮೂವರು ಅಪರಿಚಿತರ ತಂಡ ಪಿಸ್ತೂಲು ಹಾಗೂ ಚೂರಿ ತೋರಿಸಿ ಮನೆಯವರನ್ನು ಬೆದರಿಸಿ, ಚಿನ್ನಾಭರಣ, ನಗದು ದೋಚಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಕೆದಿಲ ನಿವಾಸಿ ಶಿವಶಂಕರ ಪುತ್ತೂರಾಯ ಎಂಬವರ ಮನೆಗೆ ರಾತ್ರಿ ಆಗಮಿಸಿದ ಮೂವರು ತಂಡ, ಪಿಸ್ತೂಲು, ಚೂರಿ ತೋರಿಸಿ ಬೆದರಿಸಿ ಮನೆಯವರನ್ನು ಕಟ್ಟಿಹಾಕಿ ನೆಕ್ಲೇಸ್, ಕರಿಮಣಿ ಸರ, ಚೈನ್, ಕಿವಿಯೋಲೆ ಪಡೆದುಕೊಂಡಿದ್ದಲ್ಲದೆ ಬೆಡ್ ರೂಮಿನ ಕಪಾಟಿನಲ್ಲಿದ್ದ ನಗದು, ಮೊಬೈಲ್ ಫೋನ್ ಹಾಗೂ ಎಟಿಎಮ್ ಕಾರ್ಡನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಕಟ್ಟಿದ್ದಲ್ಲಿಂದ ಕಷ್ಟಪಟ್ಟು ಬಿಡಿಸಿಕೊಂಡ ಮನೆಯವರು, ಸಂಬಂಧಿಕರಿಗೆ ಮಾಹಿತಿ ನೀಡಿ ಬಳಿಕ ಪುತ್ತೂರು ಠಾಣೆಗೆ ಮಾಹಿತಿ ನೀಡಿದ್ದಾರೆ. ಪುತ್ತೂರು ನಗರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.