(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.06. 2023ರ ಜನವರಿಯಲ್ಲಿ 2ನೇ ಬಾರಿಗೆ ಅತಿಹೆಚ್ಚು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವಾಗಿರುವ ದಾಖಲೆ ಬೆನ್ನಲ್ಲೇ, ದೇಶಾದ್ಯಂತ ಬೋಗಸ್ ಇನ್ ವಾಯ್ಸ್ ಗಳನ್ನು ಸೃಷ್ಟಿಸಿ ಸಾವಿರಾರು ಕೋಟಿ ರೂ. ವಂಚಿಸುವ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವ ವಿಚಾರವೂ ಬೆಳಕಿಗೆ ಬಂದಿದೆ.
‘ಅಡ್ಡದಾರಿ’ಯಲ್ಲಿ ತೆರಿಗೆ ಸೋರಿಕೆ ತಡೆಯುವ ಉದ್ದೇಶದಿಂದ ಎಷ್ಟೇ ಬಿಗಿ ನಿಯಮಗಳನ್ನು ತಂದರೂ ತೆರಿಗೆ ವಂಚಕರ ಹೆಡೆಮುರಿ ಕಟ್ಟಲು ಸಾಧ್ಯವಾಗುತ್ತಿಲ್ಲ. 2022ರ ಏಪ್ರಿಲ್ನಲ್ಲಿ 1.68 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹವಾಗಿತ್ತು. ಈಗ 2023ರ ಜನವರಿ ಯಲ್ಲಿ 2ನೇ ಬಾರಿಗೆ ಅತಿಹೆಚ್ಚು 1.55 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಅದೇ ರೀತಿ ವಂಚನೆಯಲ್ಲೂ ದಾಖಲೆ ಸೃಷ್ಟಿಯಾಗಿದೆ. 2017-18ರಲ್ಲಿ ಜಿಎಸ್ಟಿ ಜಾರಿಯಾದ ಮೊದಲ ವರ್ಷ 12 ಕೋಟಿ ರೂ. ವಂಚನೆ ಪ್ರಕರಣಗಳು ಪತ್ತೆಯಾಗಿದ್ದವು. ನಂತರ 2018-19ರಲ್ಲಿ 11,251 ಕೋಟಿ ರೂ. ವಂಚನೆ ಪತ್ತೆಯಾಗಿತ್ತು. 2017ರ ಜು.1ರಿಂದ 2019 ಜೂ.25ರವರೆಗೆ 13,829 ಕೋಟಿ ರೂ. ಹಾಗೂ 2020-21 ಹಾಗೂ 2021-22ರಲ್ಲಿ 55,575 ಕೋಟಿ ರೂ. ವಂಚನೆ ನಡೆದಿದೆ. 2017ರಲ್ಲಿ ಜಿಎಸ್ಟಿ ಜಾರಿಯಾದಾಗಿನಿಂದ ಈವರೆಗೆ 68 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೋಸ ನಡೆದಿದೆ.