(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.21. ಖಾಸಗಿ ಶಾಲೆಗಳು ಅನಿಯಮಿತವಾಗಿ ಶುಲ್ಕ ವಸೂಲಿ ಮಾಡಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಎಚ್ಚರಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನ ಬಂದಂತೆ ಶುಲ್ಕ ನಿಗದಿ ಮಾಡುವ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾಯ್ದೆ ತಿದ್ದುಪಡಿ ಮಾಡಲಾಗಿದೆ. ಇದಕ್ಕೆ ನಿಯಮಾವಳಿ ರೂಪಿಸಿ 2018-19ನೆ ಸಾಲಿನಿಂದಲೇ ಅನುಷ್ಠಾನಕ್ಕೆ ತರಲಾಗುವುದು ಎಂದರು. ಸರಕಾರದ ನಿಯಮಾವಳಿ ಆಧರಿಸಿಯೇ ಖಾಸಗಿ ಶಾಲೆಗಳು ಶುಲ್ಕ ನಿಗದಿ ಮಾಡಬೇಕು. ತರಗತಿವಾರು ಶುಲ್ಕದ ವಿವರವನ್ನು ಶಾಲೆಗಳ ಸೂಚನಾ ಫಲಕದಲ್ಲಿ ಪ್ರಕಟಿಸುವುದು ಕಡ್ಡಾಯ. ಪ್ರಕಟಿಸದ ಶಾಲೆಗಳ ವಿರುದ್ಧ ದೂರು ನೀಡಲು ಪೋಷಕರಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.

ಪ್ರಸಕ್ತ ಸಾಲಿನ ತರಗತಿಗಳು ಮುಗಿದ ಬಳಿಕ ಮುಂದಿನ ವರ್ಷದ ಪ್ರವೇಶಾತಿ ಆರಂಭಿಸಬೇಕು. ಆದರೆ, ಕೆಲವು ಶಾಲೆಗಳು ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭಿಸಿರುವುದು ನನ್ನ ಗಮನಕ್ಕೆ ಬಂದಿದೆ. ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.













