ಉಪ್ಪಿನಂಗಡಿ: ದರೋಡೆ ಪ್ರಕರಣದ ಆರೋಪಿ ಪೊಲೀಸ್ ಬಲೆಗೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ.18. ದರೋಡೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳಲ್ಲಿ ಓರ್ವನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ ಘಟನೆ ಸೋಮವಾರದಂದು ನಡೆದಿದೆ.

ಬಂಧಿತ ಆರೋಪಿಯನ್ನು ಕುಖ್ಯಾತ ಕ್ರಿಮಿನಲ್ ಮಹಮ್ಮದ್ ಅಲ್ತಾಫ್ ಎಂದು ಗುರುತಿಸಲಾಗಿದೆ. ಅಲ್ತಾಫ್ ತಲೆಮರೆಸಿಕೊಂಡಿರುವ ಇನ್ನೋರ್ವ ಆರೋಪಿಯೊಂದಿಗೆ ಸೇರಿಕೊಂಡು ಪಾರ್ಕ್, ನಿರ್ಜನ ಪ್ರದೇಶದಲ್ಲಿ ಸಿಗುವ ಪ್ರೇಮಿಗಳನ್ನು, ಒಬ್ಬಂಟಿ ವ್ಯಕ್ತಿಗಳನ್ನು ಬೆದರಿಸಿ ಚಿನ್ನಾಭರಣ ಹಾಗೂ ಹಣವನ್ನು ದೋಚುವುದನ್ನೇ ವೃತ್ತಿಯಾಗಿಸಿಕೊಂಡಿದ್ದರು. ಆದರೆ ಮರ್ಯಾದೆಗೆ ಅಂಜಿ ಯಾರು ಕೂಡಾ ಈ ಬಗ್ಗೆ ದೂರು ದಾಖಲಿಸಲು ಮುಂದಾಗುತ್ತಿರಲಿಲ್ಲ. ಇತ್ತೀಚೆಗೆ ಉಪ್ಪಿನಂಗಡಿಯ ನೇತ್ರಾವತಿ ನದಿ ಕಿನಾರೆಯ ನಿರ್ಜನ ಪ್ರದೇಶಕ್ಕೆ ಮದ್ಯವ್ಯಸನಿ ಯುವಕನೋರ್ವನನ್ನು ಎಳೆದುಕೊಂಡು ಹೋಗಿ ಹಲ್ಲೆ ನಡೆಸುತ್ತಿದ್ದಾಗ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಹಂಝ ಎಂಬವರು ಯುವಕನ ರಕ್ಷಣೆಗೆ ಆಗಮಿಸಿದ್ದು, ಈ ಸಂದರ್ಭ ಆರೋಪಿಗಳು ಹಂಝರಿಗೆ ಗಂಭೀರ ಹಲ್ಲೆ ನಡೆಸಿ ಅವರಲ್ಲಿದ್ದ ಮೊಬೈಲ್ ಹಾಗೂ ಏಳು ಸಾವಿರ ರೂಪಾಯಿ ದರೋಡೆಗೈದು ಪರಾರಿಯಾಗಿದ್ದರು. ಈ ಬಗ್ಗೆ ಹಂಝ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ದರೋಡೆ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಇದೀಗ ಓರ್ವ ಆರೋಪಿಯನ್ನು ಬಂಧಿಸಿದ್ದು, ಇನ್ನೊಬ್ಬನಿಗಾಗಿ ಬಲೆ ಬೀಸಿದ್ದಾರೆ. ಆರೋಪಿ ಅಲ್ತಾಫ್ ನ ಮೇಲೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಎರಡು ದರೋಡೆ ಪ್ರಕರಣ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಂದು ಮನೆ ಕಳ್ಳತನ ಪ್ರಕರಣ ದಾಖಲಾಗಿದೆ.

Also Read  ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆ ➤ ಮೇ 13ಕ್ಕೆ ಫಲಿತಾಂಶ !!

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ, ಎಎಸ್ಪಿ ಡಾ. ಅರುಣ್, ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಗೋಪಾಲ ನಾಯ್ಕ ಅವರ ಮಾರ್ಗದರ್ಶನದಲ್ಲಿ, ಉಪ್ಪಿನಂಗಡಿ ಪೊಲೀಸ್ ಠಾಣಾ ಉಪ ನಿರೀಕ್ಷಕ ನಂದಕುಮಾರ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Also Read  ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ➤ ಚಾಲಕ ಗಂಭೀರ...!

error: Content is protected !!
Scroll to Top