(ನ್ಯೂಸ್ ಕಡಬ) newskadaba.com ಕಾಸರಗೋಡು, ಜ.13. ಕರ್ನಾಟಕದ ಗಡಿಯಿಂದ ಸುಮಾರು ಐದು ಕಿ.ಮೀ. ದೂರದಲ್ಲಿರುವ ಕೇರಳದ ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕಿನ ಕಾಟು ಕುಕ್ಕೆಯಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದೆ. ಇಲ್ಲಿರುವ ಫಾರ್ಮ್‌ಗಳಲ್ಲಿ 200ಕ್ಕೂ ಅಧಿಕ ಸೋಂಕು ಬಾಧಿತ ಹಂದಿಗಳು ಸಾವಿಗೀಡಾಗಿರುವುದಾಗಿ ವರದಿ ತಿಳಿಸಿದೆ. ಇದರ ಬೆನ್ನಲ್ಲೇ ಸುಮಾರು 500 ಕ್ಕೂ ಹೆಚ್ಚು ಹಂದಿಗಳ ಮಾರಾಣ ಹೋಮ ಮಾಡಲಾಗುತ್ತಿದೆ.
ಇದೀಗ ಸೋಂಕು ಪತ್ತೆಯಾದ ಕೇಂದ್ರದಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಮೂರು ತಿಂಗಳಿಗೆ ಹಂದಿ ಮಾಂಸಕ್ಕೆ ನಿಷೇಧ ಹೇರಲಾಗಿದೆ. ಈ ಕೇಂದ್ರದಿಂದ ಹಂದಿ ಸಾಗಾಟ, ಹಂದಿ ಮಾಂಸ ಮಾರಾಟ, ಮಾಂಸ ಉತ್ಪನ್ನ ಮೊದಲಾದವುಗಳ ಮಾರಾಟ, ಸಾಗಾಟ ನಿಷೇಧಿಸಲಾಗಿದೆ. ಸೋಂಕು ಪತ್ತೆಯಾದ ಕೇಂದ್ರದ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿನ ಹಂದಿಗಳನ್ನು ಕೊಂದು ಸಂಸ್ಕರಿಸಲಾಗುವುದು. ಇದಕ್ಕಾಗಿ ಜಿಲ್ಲಾ ಮೃಗ ಸಂರಕ್ಷಣಾ ಕಚೇರಿಯ ರಾಫಿಡ್ ರೆಸ್ಪಾನ್ಸ್ ತಂಡವನ್ನು ರಚಿಸಲಾಗಿದೆ.
ಪೊಲೀಸ್, ಕಂದಾಯ, ಸ್ಥಳಿಯಾಡಳಿತ ಸಂಸ್ಥೆ, ಮೋಟಾರು ವಾಹನ ಇಲಾಖೆ, ಅಗ್ನಿ ಶಾಮಕ ದಳ ಮೊದಲಾದವುಗಳ ನೆರವು ಪಡೆಯಲಾಗುವುದು. ಕಾಸರಗೋಡು ಜಿಲ್ಲಾ ಹೆಚ್ಚುವರಿ ದಂಡಾಧಿಕಾರಿಗಳ ನೇತೃತ್ವದಲ್ಲಿ ತಂಡ ಕಾರ್ಯಾಚರಿಸಲಿದೆ. ಈ ಬಗ್ಗೆ ಪೊಲೀಸ್, ಮೋಟಾರು ವಾಹನ ಇಲಾಖೆ ತಪಾಸಣೆ ಹಾಗೂ ನಿಗಾ ವಹಿಸಲಿದೆ. 500 ಹಂದಿಗಳನ್ನು ಕೊಲ್ಲಲು ಆದೇಶ: ಕಾಸರಗೋಡಿನ ಎಣ್ಮಕಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಟುಕುಕ್ಕೆ ಖಾಸಗಿ ಜಮೀನಿನಲ್ಲಿ ಆಫ್ರಿಕನ್ ಹಂದಿ ಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ ಶುಕ್ರವಾರ 532 ಹಂದಿಗಳನ್ನು ಕೊಲ್ಲಲು ಪಶುಸಂಗೋಪನಾ ಇಲಾಖೆಯ ಕ್ಷಿಪ್ರ ಕಾರ್ಯಾಚರಣೆ ತಂಡ (ಆರ್‌ಆರ್‌ಟಿ) ಸಜ್ಜಾಗಿದೆ.