(ನ್ಯೂಸ್ ಕಡಬ) newskadaba.com ಕೊಚ್ಚಿ, ಜ.12. ಕೇರಳದ ಪ್ರಸಿದ್ಧ ಶಬರಿಮಲೆ ದೇಗುಲದ ‘ಅರವಣ ಪ್ರಸಾದ’ ಮಾರಾಟಕ್ಕೆ ಹಾಗೂ ತಯಾರಿಕೆಗೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಪ್ರಸಾದ ತಯಾರಿಕೆಯಲ್ಲಿ ಬಳಸಲಾಗುವ ಏಲಕ್ಕಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಕೀಟನಾಶಕ ಕಂಡು ಬಂದ ಹಿನ್ನೆಲೆಯಲ್ಲಿ ಪ್ರಸಾದವನ್ನು ಮಾರಾಟ ಮಾಡದಂತೆ ತಿರುವಾಂಕೂರು ದೇವಸ್ವಂ ಮಂಡಳಿಗೆ ಹೈಕೋರ್ಟ್ ಸೂಚಿಸಿದೆ. ಇದರಿಂದ ಆರೂವರೆ ಕೋಟಿ ರೂ. ಮೌಲ್ಯದ ಅರವಣ ಪ್ರಸಾದ ವ್ಯರ್ಥ ಆಗಲಿದೆ.
ಪ್ರಸಾದ ತಯಾರಿಸಲು ಖರೀದಿಸುವ ಏಲಕ್ಕಿಯನ್ನು ಪರೀಕ್ಷೆಗೆ ಒಳಪಡಿಸಿದ ವೇಳೆ ಅದರಲ್ಲಿ 14 ವಿವಿಧ ಮಾದರಿಯ ಕೀಟನಾಶಕ ಕಂಡುಬಂದಿತ್ತು. ಗುತ್ತಿಗೆ ಪಡೆಯಲು ವಿಫಲವಾಗಿದ್ದ ಕಂಪನಿಯೊಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಈ ಪರೀಕ್ಷೆಗೆ ಆದೇಶಿಸಿತ್ತು ಎನ್ನಲಾಗಿದೆ.