(ನ್ಯೂಸ್ ಕಡಬ) newskadaba.com ಮಂಗಳೂರು, ಜ.09. ತಿಮಿಂಗಿಲ ವಾಂತಿಯನ್ನು ಮಾರಾಟ ಮಾಡಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಸಗರ ಅಪರಾಧ ಪತ್ತೆದಳ(ಸಿಸಿಬಿ)ದ ಪೊಲೀಸರು ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ.
ಬಂಧಿತರನ್ನು ಕುವೆಟ್ಟು ಗ್ರಾಮದ ಗುರುವಾಯನಕೆರೆಯ ಪಡ್ಯಾರು ಮನೆ ನಿವಾಸಿ ನಿಮಿತ್ (26) ಹಾಗೂ ಪುಂಜಾಲಕಟ್ಟೆಯ ಕುಕ್ಕಳ ಮನೆಯ ಯೋಗೀಶ್ (41) ಎಂದು ಗುರುತಿಸಲಾಗಿದೆ.
‘ತಿಮಿಂಗಿಲ ವಾಂತಿಯನ್ನು ವಾಣಿಜ್ಯ ಉದ್ದೇಶಕ್ಕೆ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಆರೋಪಿಗಳು ನಗರದ ಲಾಲ್ ಬಾಗ್ ಕರಾವಳಿ ಮೈದಾನ ಪರಿಸರದಲ್ಲಿ ಇದನ್ನು ಮಾರಾಟ ಮಾಡಲು ಯತ್ನಿಸಿದ್ದರು ಎನ್ನಲಾಗಿದೆ. ಖಚಿತ ಮಾಹಿತಿಯ ಆಧಾರದಲ್ಲಿ ಸಿಸಿಬಿ ಇನ್ ಸ್ಪೆಕ್ಟರ್ ಶ್ಯಾಮ್ ಸುಂದರ್ ಎಚ್.ಎಂ ನೇತೃತ್ವದಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಆರೋಪಿಗಳಿಂದ 3.2 ಕೆ.ಜಿ ತೂಕದ ಅಂಬರ್ ಗ್ರೀಸ್ ಹಾಗೂ 2 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ತಿಮಿಂಗಿಲ ವಾಂತಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ದರ ಇದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.