ಮಂಗಳೂರು: ನೂತನ ಲೋಕಾಯುಕ್ತ ಎಸ್ಪಿಯಾಗಿ ಕಡಬ ಮೂಲದ ಸೈಮನ್ ಸಿಎ ನಿಯೋಜನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 09. ದ.ಕ.ಮತ್ತು ಉಡುಪಿ ಜಿಲ್ಲೆಯನ್ನೊಳಗೊಂಡ ಮಂಗಳೂರು ಲೋಕಾಯುಕ್ತ ಎಸ್ಪಿಯಾಗಿ ಕಡಬ ಮೂಲದ ಸೈಮನ್ ಸಿ.ಎ.ಅವರನ್ನು ಆಯ್ಕೆ ಮಾಡಿ ಸರಕಾರ ಆದೇಶಿಸಿದೆ.

ಮಂಗಳೂರು ಲೋಕಾಯುಕ್ತ ಎಸ್ಪಿಯಾಗಿದ್ದ ಲಕ್ಷ್ಮೀಗಣೇಶ್ ಅವರನ್ನು ಬೆಂಗಳೂರು ನಗರ ಲೋಕಾಯುಕ್ತ ಪ್ರಧಾನ ಕಚೇರಿಗೆ ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಈ ಹಿಂದೆ ದ.ಕ, ಉಡುಪಿ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಸೇರಿದಂತೆ 4 ಜಿಲ್ಲೆಗಳನ್ನೊಳಗೊಂಡ ಭ್ರಷ್ಟಾಚಾರ ನಿಗ್ರಹದಳದ ಪಶ್ಚಿಮ ವಲಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದ ಸೈಮನ್, ಎಸಿಬಿ ರದ್ದಾದ ಬಳಿಕ ಮತ್ತೆ ಲೋಕಾಯುಕ್ತಕ್ಕೆ ಮರು ನಿಯೋಜನೆಗೊಂಡಿದ್ದರು. ಮೂಲತ: ಕಡಬ ಹಳೆಸ್ಟೇಷನ್ ನಿವಾಸಿಯಾಗಿರುವ ಇವರು ಉಪ್ಪಿನಂಗಡಿಯಲ್ಲಿ ವಾಸವಾಗಿದ್ದಾರೆ. ಉಪ್ಪಿನಂಗಡಿಯಲ್ಲಿ ತನ್ನ ಶಿಕ್ಷಣವನ್ನು ಆರಂಭಿಸಿದ ಸೈಮನ್‌ರವರು ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಪದವಿ ಪೂರೈಸಿ ಮಂಗಳೂರು ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ವಕೀಲ ವೃತ್ತಿ ಆರಂಭಿಸಿದ್ದರು. 2002ರಲ್ಲಿ ರಾಜ್ಯ ಸಿಐಡಿ ವಿಭಾಗದ ಸಬ್ ಇನ್ಸ್ಪೆಕ್ಟರ್ ಆಗಿ ಪೊಲೀಸ್ ಸೇವೆ ಆರಂಭಿಸಿ ಬಳಿಕ ಪದೋನ್ನತಿಗೊಂಡು ಸರ್ಕಲ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. 2020ರಲ್ಲಿ ಎಸ್ಪಿಯಾಗಿ ಪದೋನ್ನತಿಗೊಂಡು, ಎಸಿಬಿ ಪಶ್ಚಿಮ ವಲಯದ ಎಸ್ಪಿಯಾಗಿ 2021 ಆಗಸ್ಟ್ 2ರಂದು ಅಧಿಕಾರ ವಹಿಸಿಕೊಂಡಿದ್ದರು. ಸೈಮನ್ ಅವರು ಪ್ರಸ್ತುತ ಲೋಕಾಯುಕ್ತ ಬೆಂಗಳೂರು ಪ್ರಧಾನ ಕಚೇರಿಯಲ್ಲಿ ಎಸ್ಪಿಯಾಗಿ ಕರ್ತವ್ಯದಲ್ಲಿದ್ದಾರೆ. ಜ.12ರಂದು ಅವರು ಮಂಗಳೂರು ಲೋಕಾಯುಕ್ತ ಎಸ್ಪಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಮಾಹಿತಿ ಲಭಿಸಿದೆ.

Also Read  ನೆಟ್ ಫ್ಲಿಕ್ಸ್ ನಿಂದ 47 ಕೋಟಿ ವಂಚನೆ ಆರೋಪ-ದೂರು

error: Content is protected !!
Scroll to Top