(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜ.08. ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯಿಂದ ಅಮೆರಿಕದ ಐಟಿ ಕಂಪನಿಗಳು ಸೇರಿದಂತೆ ಬೃಹತ್ ಉದ್ದಿಮೆಗಳು ಉದ್ಯೋಗ ಕಡಿತ ಮಾಡಿವೆ. ಅಷ್ಟೇ ಅಲ್ಲ, ಬಹುತೇಕ ಕಂಪನಿಗಳು ಹೊಸ ನೇಮಕಾತಿಗಳನ್ನು ಸ್ಥಗಿತಗೊಳಿಸಿದ ಪರಿಣಾಮವಾಗಿ ಭಾರತದ ಸಾವಿರಾರು ಟೆಕ್ಕಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.
ಅಮೆಜಾನ್, ಸೇಲ್ಸ್‌ಫೋರ್ಸ್, ಮೆಟಾ, ಟ್ವಿಟರ್, ಊಬರ್ ಸೇರಿದಂತೆ ಹಲವಾರು ಟೆಕ್ ಕಂಪನಿಗಳು ಇತ್ತೀಚೆಗೆ ಉದ್ಯೋಗ ಕಡಿತ ಆರಂಭಿಸಿದ್ದು, ಹೊಸ ನೇಮಕಾತಿ ಸ್ಥಗಿತಗೊಳಿಸಿವೆ. ಒಂದೆಡೆ ಮಿತಿಮೀರಿದ ಹಣದುಬ್ಬರ, ಮತ್ತೊಂದೆಡೆ ಆರ್ಥಿಕ ಹಿಂಜರಿತದ ಭೀತಿಯಿಂದ ಹೊಸ ನೇಮಕಾತಿ ಸ್ಥಗಿತಗೊಳಿಸಿರುವುದರಿಂದ ಟೆಕ್ಕಿಗಳು ಕೆಲಸ ಹುಡುಕುವುದು ದಿನದಿಂದ ದಿನಕ್ಕೆ ದುಸ್ತರವಾಗುತ್ತಿದೆ.