ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆ ► ಬೆಳ್ಳಿಹಬ್ಬದ ಸಂಭ್ರಮ, ರಜತ ಮಹೋತ್ಸವ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಡಿ.10. ನೂಜಿಬಾಳ್ತಿಲ ಬೆಥನಿ ಸಂಯುಕ್ತ ಪ.ಪೂ. ಮಹಾವಿದ್ಯಾಲಯದಲ್ಲಿ ಡಿ.7 ರಂದು ಬೆಳ್ಳಿಹಬ್ಬದ ಸಮಾರೋಪ ಸಮಾರಂಭ ಹಾಗೂ ವಾರ್ಷಿಕೋತ್ಸವ ಸಂಭ್ರಮ ಆಚರಿಸಲಾಯಿತು. ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪುಜ್ಯ ಡಾ|ಗೀ| ವರ್ಗೀಸ್ ಮಾರ್ ಮಕಾರಿಯೋಸ್ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿ, ಶಿಕ್ಷಣವು ಸಮಭಾವನೆಯನ್ನು ಸದ್ಭಾವನೆಯನ್ನು ರೂಪಿಸಬೇಕು. ತನ್ನ ಬಾಲ್ಯ ಕೌಮಾರ್ಯಗಳನ್ನು ಇಲ್ಲಿಯೇ ಕಳೆದವನಾಗಿದ್ದು  ಈ ಪರಿಸರ ತುಳುನಾಡ ಸಂಸ್ಕೃತಿಯನ್ನು ಅಪಾರವಾಗಿ ಮೆಚ್ಚಿಕೊಂಡವನಾಗಿರುತ್ತೇನೆ. ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಅದರ ಉನ್ನತಿಗಾಗಿ ಹಗಲಿರುಳು ದುಡಿದಿರುವ ಬೆಥನಿ ಸನ್ಯಾಸಿ ಸಮೂಹದ ಸೇವೆಯನ್ನು ಮುಕ್ತಕಂಠದಲ್ಲಿ ಶ್ಲಾಘಿಸಿದ ಅವರು ವಿದ್ಯಾರ್ಥಿಗಳು ಸನಾತನ ಸಂಸ್ಕೃತಿಯ ಮೌಲ್ಯಗಳಾದ ಪಿತೃ ದೇವೋಭವ, ಮಾತೃದೇವೋಭವ, ಗುರುದೇವೋಭವ ಎಂಬ ಭಾವನೆಗಳನ್ನು ಬೆಳೆಸಿಕೊಂಡು ಸಜ್ಜನ ಜೀವಿಗಳಾಗಿ ಸಮಾಜಕ್ಕೆ ಮಾದರಿ ಮನುಷ್ಯರಾಗಿ ಬಾಳಬೇಕು. ಅಲ್ಲದೆ ಈ ಸಂಸ್ಥೆಯ ಎಲ್ಲಾ ವಿಧಧ ಏಳಿಗೆಗೆ ಎಲ್ಲರ ಪರಿಶ್ರಮ ಅತೀ ಅಗತ್ಯವಾಗಿದೆ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಅಧ್ಯಕ್ಷತೆ ವಹಿಸಿದ ಬೆಥನಿ ಸನ್ಯಾಸ ಸಮೂಹದ ಸುಪೀರಿಯರ್ ಜನರಲ್ ವೆ|ರೆ|ಫಾ|ಜೋಸ್ ಕುರುವಿಳ ಒಐಸಿ ಮಾತನಾಡಿ ದೇಶದಾದ್ಯಂತ ಹಾಗೂ ಎಧಿಯೋಪಿಯಾದಲ್ಲಿ ನಮಗೆ ವಿದ್ಯಾಸಂಸ್ಥೆಗಳಿವೆ. ಆದರೆ ನೂಜಿಬಾಳ್ತಿಲದಂತಹ ಗ್ರಾಮದಲ್ಲಿ ಶಿಸ್ತಿನ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆಯ ಬಗ್ಗೆ ಅಭಿಮಾನವಿದೆ. ದಿ|ರೆ|ಫಾ| ಜೋಸ್ ವಾಳಕುಝಿ ಒಐಸಿ ಯವರು ಈ ಸಂಸ್ಥೆಗಾಗಿ ಸಲ್ಲಿಸಿದ ಸೇವೆಯನ್ನು ತ್ಯಾಗವನ್ನು  ಸ್ಮರಿಸಿದಲ್ಲದೆ ಅವರ ಮಾರ್ಗದರ್ಶನ ನಮಗೆಲ್ಲರಿಗೂ ಮಾದರಿಯಾಗಲಿ ಎಂದು ಹಾರೈಸಿದರು.

ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದ ನವಜ್ಯೋತಿ ಪ್ರೊವಿನ್ಸ್‌ನ ಪ್ರೊವಿನ್ಶ್ಯಲ್ ಸುಪೀರಿಯರ್ ವೆರಿ|ರೆ|ಫಾ|ವಿಲ್ಯಮ್ ನೆಡುಂಪುರತ್ ಓಐಸಿ ನೂತನವಾಗಿ ನಿರ್ಮಿಸಿದ ಶೌಚಾಲಯವನ್ನು ಉದ್ಘಾಟಿಸಿ ಮಾತನಾಡಿ ಆರ್ಥಿಕ ದುಸ್ಥಿತಿಯ ಕಾಲದಲ್ಲಿ ಇಲ್ಲಿ ವ್ಯವಸ್ಥಿತ ಕಟ್ಟಡವನ್ನು ನಿರ್ಮಿಸಿ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡಿದ ಸಂಸ್ಥೆಯ ಬಗ್ಗೆ ಅಭಿಮಾನವಿದೆ. ಇಲ್ಲಿ ವಿದ್ಯಾಭ್ಯಾಸ ಪಡೆದ ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ಲಭಿಸಿ ಅವರ ಕುಟುಂಬಗಳು ಆರ್ಥಿಕ ಭದ್ರತೆ ಹೊಂದಿದೆ ಎಂಬ ವಿಚಾರವು ನಮಗೆ ಸಂತೋಷ ನೀಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇಚಿಲಂಪಾಡಿಯ ಕೇಶವರಂತಹ ಹಿರಿಯ ವಿದ್ಯಾರ್ಥಿಗಳ ಕೊಡುಗೆಗಳು ಮೆಚ್ಚಲೇಬೇಕಾದುದು. ಹಿರಿಯ ವಿದ್ಯಾರ್ಥಿಗಳು, ಪಾಲಕರು ಸಹಕರಿಸಿದರೆ ಇನ್ನಷ್ಟು ಅಭಿವೃದ್ದಿ ಕಾರ್ಯಗಳನ್ನು ನಡೆಸಲು ಸನ್ನದ್ದರಿದ್ದೇವೆ ಎಂದರು.

Also Read  ಕೋವಿಡ್ ಪರೀಕ್ಷೆಗೆ ಹೊಳಪಡದಿದ್ದರೆ 3ವರ್ಷ ಜೈಲು ➤ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!!

ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್ ಮಾತನಾಡಿ ಈ ಶಾಲೆಯ ಸ್ಥಾಪನೆಯ ಕಾಲದಲ್ಲಿ ತನ್ನ ತಂದೆಯವರಾದ ದಿ| ಪೌಲೋಸ್ರವರು ನೀಡಿದ ಸಹಕಾರವನ್ನು ನೆನಪಿಸಿದಲ್ಲದೆ ತನಗೂ ಶಾಲೆಗೂ ಅತೀವ ಸಂಬಂಧವಿದೆ. ಅವಕಾಶ ಸಿಕ್ಕಿದಂತೆ ಸರಕಾರಿ ಅನುದಾನದ ಮೂಲಕ ಸಹಾಯ ಮಾಡುತ್ತೇನೆ ಎಂದರು. ಹಿರಿಯ ವಿದ್ಯಾರ್ಥಿಯೂ, ಪುತ್ತೂರು ತಾಲೂಕು ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿಯಾದ ಮಾಮಚ್ಚನ್ ಎಂ. ಹಿರಿಯ ವಿದ್ಯಾರ್ಥಿಗಳ ಪರವಾಗಿ ಮಾತನಾಡಿ ಈ ಸಂಸ್ಥೆ ಇಲ್ಲಿನ ಗುರುಗಳು, ಶಿಕ್ಷಕರು ನಮಗೆ ನೀಡಿದ ಮಾರ್ಗದರ್ಶನ, ಬೋಧನೆಗಳು ಅವಿಸ್ಮರಣೀಯ. ಇಲ್ಲಿ ಪಡೆದ ವಿದ್ಯಾರ್ಜನೆಯಿಂದ ವಿವಿಧ ಕ್ಷೇತ್ರಗಳಲ್ಲಿ, ದೇಶ ವಿದೇಶಗಳಲ್ಲಿ ಉದ್ಯೋಗ ನಿರತರಾಗಿ ಭದ್ರ ಭವಿಷ್ಯವನ್ನು ಕಟ್ಟಿಕೊಂಡಿರುವ ನಮ್ಮ ಸಹಪಾಠಿಗಳು ಸಂಸ್ಥೆಯನ್ನೆಂದೂ ಮರೆಯಲಾರರು. ಪಿಯುಸಿ ಮೊದಲ ತಂಡದ ಸದಸ್ಯರನ್ನು ಆಹ್ವಾನಿಸಿ ಸ್ಮರಣಿಕೆ ನೀಡಿ ಗೌರವಿಸಿದರಿಂದ ನಾನು ತುಂಬಾ ಸಂತೋಷ ಪಡುತ್ತೇನೆ. ನಮ್ಮ ಸಹಕಾರ ಸದಾ ಈ ಸಂಸ್ಥೆಯ ಮೇಲಿದೆ ಎಂದರು.

ಪುತ್ತೂರು ಧರ್ಮಪ್ರಾಂತ್ಯಕ್ಕೆ ನೂತನವಾಗಿ ಅಭಿಷಿಕ್ತರಾದ ಪರಮಪುಜ್ಯ ಡಾ|ಗೀ|ವರ್ಗೀಸ್ ಮಾರ್ ಮಕಾರಿಯೋಸ್ ಅವರನ್ನು ಬೆಥನಿ ಸನ್ಯಾಸ ಸಮೂಹದ ಸುಪೀರಿಯರ್ ಜನರಲ್ ವೆ|ರೆ|ಫಾ| ಜೋಸ್ ಕುರುವಿಳ ಒಐಸಿ ಸಂಸ್ಥೆಯ ವತಿಯಿಂದ ಶಾಲು ಹೊದಿಸಿ ಹಾರಾರ್ಪಣೆ ಮಾಡಿ ಫಲಪುಷ್ಪ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಹಿರಿಯ ವಿದ್ಯಾರ್ಥಿಯಾದ ಮಂಗಳೂರಿನ ಗಾರ್ಡಿಯನ್ ಕನ್ಸ್ಟ್ರಕ್ಷನ್ ಮಾಲಕ ಕೇಶವ ಗೌಡ ಅವರ ಪ್ರಾಯೋಜಕತ್ವದಲ್ಲಿ ಸುಮಾರು 10 ಲಕ್ಷ ದಷ್ಟು ಕೊಡುಗೆಯನ್ನು ನೆನಪಿಸಿ ಅವರಿಗೆ ಬಿಷಪ್ ಪರಮಪುಜ್ಯ ಗೀವರ್ಗೀಸ್ ಮಾರ್ ಮಕಾರಿಯೋಸ್ ಅವರಿಂದ ಸನ್ಮಾನಿಸಲಾಯಿತು. ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ತಾಲೂಕು ಸಹಾಯಕ ಯುವಸಬಲೀಕರಣ ಮತ್ತು ಕ್ರೀಢಾಧಿಕಾರಿಯಾದ ಮಾಮಚ್ಚನ್ರನ್ನು  ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಅಭಿಲಾಷ್ ಪಿ.ಕೆ ರವರನ್ನು ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ ಇವರಿಂದ ಸನ್ಮಾನಿಸಲಾಯಿತು.

ಕಳೆದ 35 ವರ್ಷಗಳಿಂದ ಸಂಸ್ಥೆಯಲ್ಲಿ ಶಿಕ್ಷಕರಾಗಿ ಹಿರಿಯ ಉಪನ್ಯಾಸಕರಾಗಿ ಸೇವೆ ಸಲ್ಲಿಸುವುದರೊಂದಿಗೆ ಪ್ರಥಮ ಪಿಯುಸಿ ತಂಡಕ್ಕೆ ವಿದ್ಯಾರ್ಜನೆ ನೀಡಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ ಉಪನ್ಯಾಸಕ ಜೋಸೆಫ್ ಟಿ.ಜೆ ಅವರನ್ನು ಪ್ರಥಮ ಪಿಯುಸಿ ತಂಡದ ಮಾಮಚ್ಚನ್ರವರ ನೇತೃತ್ವದಲ್ಲಿ ಹಿರಿಯ ವಿದ್ಯಾರ್ಥಿಗಳು  ಶಾಲು ಹೊದಿಸಿ ಮೈಸೂರು ಪೇಟ ತೊಡಿಸಿ ಹಾರಾರ್ಪಣೆ ಮಾಡಿ ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ವಿದ್ಯಾಸಂಸ್ಥೆಯ ಪ್ರಾಂಶುಪಾಲ ಜಾರ್ಜ್ ಟಿ.ಎಸ್. ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

Also Read  ಬಿಜೈ: ಲಾಂಡ್ರಿ ಬೆಂಕಿಗಾಹುತಿ ► ದುಬಾರಿ ಸೀರೆ ಸೇರಿ ಲಕ್ಷಕ್ಕೂ ಅಧಿಕ ನಷ್ಟ

1991-92ರ ಪ್ರಥಮ ಬ್ಯಾಚಿನ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಸ್ಥೆಯಲ್ಲಿ ವಿನ್ಯಾಸಗೊಳಿಸಿರುವ ನೂತನ ವೆಬ್ಸೈಟನ್ನು ರೆ|ಫಾ| ಮಾತ್ಯು ಮೋಡಿಯಿಲ್ ಅನಾವರಣಗೊಳಿಸಿದರು. ಪ್ರೌಢಶಾಲಾ ವಿಭಾಗದ 10ನೇ ತರಗತಿ ವಿದ್ಯಾರ್ಥಿ ಸಮ್ಯಕ್ತ್‌ ಎಚ್  ಅವರು ರಚಿಸಿರುವ ಕವನ ಸಂಕಲನವೊಂದನ್ನು ಅಂಕುರ ಎಂಬ ಹೆಸರಿನಲ್ಲಿ ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಕೈಕುರೆ ಬಿಡುಗಡೆಗೊಳಿಸಿದರು. ಕಡಬ ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಕೇಶವ ಗೌಡ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಖಾದರ್ ಸಾಹೇಬ್ ಕಲ್ಲುಗುಡ್ಡೆ ಕಲಿಕೆಯಲ್ಲಿ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಲ್ಲದೆ ಹಿರಿಯ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗಾಗಿ ನಡೆದ ವಿವಿಧ ಪಂದ್ಯಾಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನೆಲ್ಯಾಡಿ ಸಂತ ಜಾರ್ಜ್ ಪ.ಪು.ಕಾಲೇಜಿನ ಸಂಚಾಲಕರಾದ ಅಬ್ರಹಾಂ ವರ್ಗೀಸ್, ನೆಲ್ಯಾಡಿ ಬೆಥನಿ ಐಟಿಐ ಪ್ರಾಂಶುಪಾಲರಾದ ಸಜಿ ಕೆ ತೋಮಸ್, ಇಚ್ಲಂಪಾಡಿ ಸೈಂಟ್ ಜಾರ್ಜ್ ಓರ್ಥಡೋಕ್ಸ್‌ ಚರ್ಚ್ನ ಧರ್ಮಗುರುಗಳಾದ ವಂದನೀಯ ಜಿ.ಎಂ ಸ್ಕರಿಯಾ ರಂಬಾನ್,  ರೆ|ಫಾ| ಪಿ.ಕೆ ಅಬ್ರಹಾಂ, ರೆ|ಫಾ| ಶೈಜುಮಾತ್ಯು ಒಐಸಿ, ರೆ|ಫಾ| ಸಿರಿಲ್ ಮೈಕಲ್ ಒಐಸಿ, ರೆ|ಫಾ| ಪ್ರಾನ್ಸಿಸ್ ತೆಕ್ಕೆಪುಕ್ಕಳಂ ಒಐಸಿ, ರೆ|ಫಾ| ಬಿನೋಯ್ ಜಾರ್ಜ್ ಒಐಸಿ, ರೆ|ಫಾ| ಹನಿ ಜೇಕಬ್, ರೆ|ಫಾ| ಸೆಬಾಸ್ಟಿಯನ್ ವಿ.ಸಿ, ರೆ|ಫಾ| ವಿನ್ಸೆಂಟ್ ಪುನ್ನತ್ತಾನತ್ತ್‌, ರೆ|ಫಾ| ರೂಬಿಲ್ ಆಯಿರವೇಲಿ, ರೆ|ಫಾ| ವರ್ಗೀಸ್ ಪಿಲಿಪ್ಪೋಸ್, ರಾಜ್ಯ ಮಲಿಯಾಲಿ ಕ್ರಿಶ್ಚನ್ ಅಸೋಶಿಯೇಶನ್ ತಾಲೂಕು ಕೋಶಾಧಿಕಾರಿ ಸಜಿ ಉರುಂಬಿಲ್, ಪೊಸೊಳಿಗೆ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಪುತ್ತುಕುಂಞಿ, ರೆಂಜಿಲಾಡಿ ಶಾಲಾ ಮುಖ್ಯಗುರುಗಳಾದ ಮೇದಪ್ಪ ಗೌಡ, ಡಿಎಸ್ಎಸ್, ಡಿಎಂ, ಎಸ್ಐಸಿ ಕಾನ್ವೆಂಟ್ಗಳ ಧರ್ಮಭಗಿನಿಯರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ ಕಾಲೇಜುಗಳ ಮುಖ್ಯಸ್ಥರು, ಪದಾಧಿಕಾರಿಗಳು, ಶಿಕ್ಷಕ ಶಿಕ್ಷೇತರ ವೃಂದದವರು, ರಕ್ಷಕ ಶಿಕ್ಷಕ ಸಂಘದವರು, ವಿದ್ಯಾರ್ಥಿಗಳ ಪೋಷಕರು, ಸಾರ್ವಜನಿಕರು ಭಾಗವಹಿಸಿದ್ದರು.

Also Read  ಜಿಲ್ಲಾ ಹಾಗೂ ತಾಲೂಕು ಮಟ್ಟದ ಆತ್ಮ ಯೋಜನೆಯಡಿ ರೈತರಿಗೆ ಸಲಹೆ ಹಾಗೂ ➤ ಶ್ರೇಷ್ಟ ಕೃಷಿಕ ಪ್ರಶಸ್ತಿ

ಮುಖ್ಯಗುರುಗಳಾದ ತೋಮಸ್ ಎ.ಕೆ, ಲಿಲ್ಲಿ ಎಲಿಜಬೆತ್ ಸನ್ಮಾನಿತರ ಪರಿಚಯ ವಾಚಿಸಿದರು. ಸಂಸ್ಥೆಯ ಪ್ರಾಚಾರ್ಯರಾದ ಜಾರ್ಜ್ ಟಿ.ಎಸ್ ವರದಿ ವಾಚಿಸಿದರು. ಜಿಲ್ಲಾ ಬೆಥನಿ ವಿದ್ಯಾಸಂಸ್ಥೆಯ ಸಂಚಾಲಕರಾದ ರೆ|ಫಾ| ಸತ್ಯನ್ ತೋಮಸ್ ಒಐಸಿ  ಸ್ವಾಗತಿಸಿ, ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆಯ ಸಂಚಾಲಕ ರೆ|ಫಾ| ಆ್ಯಂಟನಿ ಒಐಸಿ ವಂದಿಸಿದರು. ಉಪನ್ಯಾಸಕಿ ಬಿನ್ಸಿ ಜಾರ್ಜ್ ಪ್ರತಿಭಾನ್ವಿತರ ಹೆಸರು ವಾಚಿಸಿದರು. ಉಪನ್ಯಾಸಕಿ ಆ್ಯನಿ ಸೆಲಿನ್, ಉಪನ್ಯಾಸಕ ಜೋಸೆಫ್ ಟಿ.ಜೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ, ಹಿರಿಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

error: Content is protected !!
Scroll to Top