ನೆಲ್ಯಾಡಿ: ಮೀನು ಹಿಡಿಯಲು ಹೋದ ವ್ಯಕ್ತಿ ನಿರುಪಾಲು ➤ ಪತ್ನಿಯಿಂದ ದೂರು ದಾಖಲು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಡಿ. 29. ಮೀನು ಹಿಡಿಯಲು ಹೋಗಿ ನದಿ ನೀರಿನಲ್ಲಿ ಮುಳುಗಿದ್ದ ಜನಾರ್ದನ ಗೌಡ ಎಂಬವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಅವರ ಪತ್ನಿ ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.


ಜನಾರ್ಧನರು ಬಂದಾರು ಗ್ರಾಮದ ಬೋಲೋಡಿ ನಿವಾಸಿ ಚಂದಪ್ಪ ಪೂಜಾರಿ ಎಂಬವರ ಪುತ್ರ ಮಹೇಶ್ ಎಂಬಾತನೊಂದಿಗೆ ಡಿ. 26ರ ಸಂಜೆ ಮುಗೇರಡ್ಕ ಬಳಿ ನೇತ್ರಾವತಿ ನದಿಯಲ್ಲಿ ಮೀನು ಹಿಡಿಯಲೆಂದು ಬಂದಿದ್ದು, ಈ ಸಂದರ್ಭ ಅವರು ನೀರು ಪಾಲಾಗಿದ್ದರು. ಆದರೆ ಅವರ ಜೊತೆಗಿದ್ದ ಮಹೇಶ್ ಈ ಬಗ್ಗೆ ಆ ಸಂದರ್ಭದಲ್ಲಿ ಯಾರಲ್ಲೂ ವಿಷಯ ತಿಳಿಸದೇ ಅಲ್ಲಿಂದ ಬಂದು, ಪದ್ಮುಂಜ ಬಾರಿಗೆ ಹೋಗಿ ಅಲ್ಲಿ ಕುಡಿದು ನಶೆ ಏರಿದ ಬಳಿಕ ಈ ಬಗ್ಗೆ ಅಲ್ಲಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ತಕ್ಷಣವೇ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು ಸೇರಿಕೊಂಡು ಜನಾರ್ದನ ಅವರಿಗಾಗಿ ರಾತ್ರಿಯಿಂದಲೇ ಹುಡುಕಾಟ ನಡೆಸಿದ್ದರು. ಆದರೆ ಡಿ. 27ರಂದು ಬೆಳಗ್ಗೆ ನೀರಿನಲ್ಲಿ ಮುಳುಗಿದ ಸುಮಾರು 10 ಮೀಟರ್ ದೂರದಲ್ಲಿ ಜನಾರ್ದನರ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಜನಾರ್ದನರವರ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಅವರ ಪತ್ನಿ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ.

Also Read  ಬಸ್ ಅಪಘಾತ ➤ಓರ್ವ ಮಹಿಳೆ ಬಲಿ …!!!!

error: Content is protected !!
Scroll to Top