ಕೋಡಿಂಬಾಳ, ಪಾದರೆ ನಿವಾಸಿಗಳ ಈಡೇರದ ರಸ್ತೆ ನಿರ್ಮಾಣ ಬೇಡಿಕೆ ► ಮುಂದಿನ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

(ನ್ಯೂಸ್ ಕಡಬ) newskadaba.com ಕಡಬ, ನ.28. ಇಲ್ಲಿನ ಕೋಡಿಂಬಾಳ ಗ್ರಾಮದ ಓಂತ್ರಡ್ಕ ಸಮೀಪ ಪಾದರೆ ಎಂಬಲ್ಲಿಗೆ ಕಡಬ-ಪಂಜ ಮುಖ್ಯ ರಸ್ತೆಯಿಂದ ರಸ್ತೆ ಸಂಪರ್ಕಕ್ಕಾಗಿ ಹಲವು ವರ್ಷಗಳಿಂದ ಜನಪ್ರತಿನಿಧಿಗಳಿಗೆ ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸುತ್ತಾ, ಜನಪ್ರತಿನಿಧಿಗಳ ಭರವಸೆಯಲ್ಲಿ ಕಾಲ ಕಳೆದಿರುವ ಇಲ್ಲಿನ ನಿವಾಸಿಗಳು ನಿರಾಸೆಗೊಂಡಿದ್ದು, ಮುಂದಿನ ಚುನಾವಣೆಯಲ್ಲಿ ಮತ ಚಲಾಯಿಸದೆ ಇರಲು ನಿರ್ಧರಿಸಿದ್ದಾರೆ.

ಓಂತ್ರಡ್ಕ ಸಮೀಪದ ಪಾದರೆ ಎಂಬಲ್ಲಿ ಸುಮಾರು 10-15 ಕುಟುಂಬಗಳಿದ್ದು ಸುಮಾರು 40-50 ಮಂದಿ ಇದ್ದಾರೆ, ಇವರಿಗೆ ಕಡಬ-ಪಂಜ ರಾಜ್ಯ ಹೆದ್ದಾರಿಯಿಂದ ಸುಮಾರು 300 ಮೀಟರ್ ಉದ್ದದ ಅಗಲ ಕಿರಿದಾದ ಏಕೈಕ ಕಾಲು ದಾರಿ ಇದ್ದು ಇದರಿಂದ ಅವರಿಗೆ ತೀವ್ರ ತೊಂದರೆಯಾಗುತ್ತಿದ್ದು ಈ ಬಗ್ಗೆ ಅವರು ಹಲವು ವರ್ಷಗಳಿಂದ ರಸ್ತೆ ನಿರ್ಮಾಣಕ್ಕಾಗಿ ಕಡಬ ಗ್ರಾ.ಪಂ.ಗೆ, ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಮನವಿ ಸಲ್ಲಿಸಿದಾಗ ನೀಡಿದ ಭರವಸೆ ಭರವಸೆಯಾಗಿಯೇ ಉಳಿದಿದೆ.

ಈಗಾಗಲೇ ಇರುವ ಕಾಲು ದಾರಿಯ ಬದಿಯಲ್ಲಿ ಸುಮಾರು ನೂರು, ನೂರೈವತ್ತು ಮೀಟರ್ ಉದ್ದದ ಚರಂಡಿ ಇದ್ದು ಇದಕ್ಕೆ ಮೋರಿ ಅಳವಡಿಸಿದರೆ ಸಮಸ್ಯೆ ಬಗೆಹರಿಯುತ್ತದೆ. ಆದರೆ ಮೋರಿ ಅಳವಡಿಕೆಗೆ ಯಾವ ವಿಧಾನದಿಂದಲೂ ಇವರಿಗೆ ಸಾಧ್ಯವಾಗುತ್ತಿಲ್ಲ. ರಸ್ತೆ ಇಲ್ಲದೆ ಇಲ್ಲಿನ ಶಾಲಾ ಮಕ್ಕಳು ಹಾಗೂ ಅಲ್ಲಿನ ನಾಗರಿಕರಿಗೆ ದಿನ ನಿತ್ಯ ಸಂಚರಿಸಲು ತೊಂದರೆಯಾಗುತ್ತಿದ್ದು, ಅಗಲ ಕಿರಿದಾದ ಕಾಲು ದಾರಿಯಲ್ಲಿ ಅಸುರಕ್ಷಿತವಾಗಿ ಸಂಚರಿಸಬೆಕಾಗುತ್ತದೆ. ಯಾಕೆಂದರೆ ಸುತ್ತಲೂ ಮರ ಗಿಡಗಳಿಂದ ಆವೃತ್ತವಾಗಿರುವುದರಿಂದ ನಡೆದಾಡಲು ಭಯವಾಗುತ್ತದೆ. ಅಲ್ಲದೆ ತಮ್ಮ ವಾಹನಗಳನ್ನು ರಸ್ತೆ ಬದಿಯಲ್ಲಿ ಇಡಬೇಕಾಗುತ್ತದೆ. ಅನಾರೋಗ್ಯ ಉಂಟಾದರೆ ಆ ಸಮಸ್ಯೆ ಹೇಳತೀರದು. ನಾಗರಿಕರ ಮೂಲಭೂತ ಸೌಲಭ್ಯವಾಗಿರುವ ರಸ್ತೆ ಸಂಪರ್ಕದ ವಿಚಾರದಲ್ಲಿ ಆರೋಪ ಪ್ರತ್ಯಾರೋಪಗಳನ್ನು ಬಿಟ್ಟು, ರಸ್ತೆ ಹಾದುಹೋಗಲಿರುವ ಜಾಗದ ಪಟ್ಟಾದಾರರನ್ನು ಮನವೊಲಿಸಿ ಸಮಸ್ಯೆಗೆ ಪರಿಹಾರ ಕಂಡು ಹುಡುಕುವಲ್ಲಿ ಅಲ್ಲಿನ ನಿವಾಸಿಗಳು ಮತ್ತು ಜನಪ್ರತಿನಿಧಿಗಳು ಪ್ರಯತ್ನ ಪಡಬೇಕಾಗುತ್ತದೆ. ಆಗ ಮಾತ್ರ ಸಮಸ್ಯೆ ಬಗೆಹರಿಯುತ್ತದೆ.

Also Read  ಸುಳ್ಯ: ನೂತನ ಸಚಿವರಿಂದ ನಾಳೆ (ಜ. 30) ಲೋಕಾರ್ಪಣೆಗೆ ಸಿದ್ದವಾದ ಅಕ್ಸಿಜನ್ ಘಟಕ..!

ಸುಮಾರು 100-150 ಮೀಟರ್ ಮೋರಿ ಅಳವಡಿಸಿ ಇಲ್ಲಿ ರಸ್ತೆ ನಿರ್ಮಿಸಿದರೆ ಈ ಸಮಸ್ಯೆ ಬಗೆಹರಿಯುತ್ತದೆ. ಆದರೆ ಈಗಾಗಲೇ ಭೇಟಿ ನೀಡಿದ ಜನಪ್ರತಿನಿಧಿಗಳು ಈ ರಸ್ತೆ ನಿರ್ಮಾಣಕ್ಕೆ ಸ್ಥಳೀಯರೊಬ್ಬರ ಆಕ್ಷೇಪಣೆ ಇದೆ ಎಂದು ಹೇಳುತ್ತಿದ್ದು, ಆದರೆ ಅಲ್ಲಿನ ನಿವಾಸಿಗಳು ಜಾಗದ ಸಮಸ್ಯೆ ಇಲ್ಲ, ಜಾಗದ ಪಟ್ಟಾದಾರರು ಮೋರಿ ಅಳವಡಿಸಿ ರಸ್ತೆ ನಿರ್ಮಾಣ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಅಲ್ಲಿನ ನಿವಾಸಿಗಳು ಜನಪ್ರತಿನಿಧಿಗಳತ್ತ ಬೊಟ್ಟು ಮಾಡುತ್ತಿದ್ದರೆ, ಜನಪ್ರತಿನಿಧಿಗಳು ರಸ್ತೆ ನಿರ್ಮಾಣ ಮಾಡಲು ಪಟ್ಟಾ ಜಾಗದವರ ಆಕ್ಷೇಪಣೆ ಇದೆ ಎಂದು ಹೇಳುತ್ತಿದ್ದಾರೆ. ಆದರೆ ಎಲ್ಲರ ಜತೆ ಮಾತುಕತೆ ನಡೆಸುವ ಗೋಜಿಗೆ ಹೋಗದಿರುವುದು ಇಲ್ಲಿನ ಸಮಸ್ಯೆ ಸಮಸ್ಯೆಯಾಗಿ ಉಳಿಯಲು ಕಾರಣವಾಗಿದೆ.

ಈ ಬಗ್ಗೆ ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಪ್ರತಿಕ್ರಿಯೆ ನೀಡಿ, ಕಳೆದ ಅವಧಿಯಲ್ಲಿ ನಾವು ಭರವಸೆ ನೀಡಿದ್ದು ಹೌದು ಆದರೆ ಬಳಿಕ ಜಾಗದ ಸಮಸ್ಯೆ ಇರುವುದು ತಿಳಿದು ಬಂದಿದೆ.  ಅಲ್ಲಿನ ನಿವಾಸಿಗಳು ಬೇಡಿಕೆ ಇಟ್ಟಿರುವ ರಸ್ತೆ ಹಾದು ಹೋಗಲಿರುವ ಜಾಗವು ಪಟ್ಟಾ ಜಾಗವಾಗಿರುವುದರಿಂದ  ಆ ಜಾಗದ ಮಾಲಿಕರ ಆಕ್ಷೇಪಣೆ ಇದೆ ಎಂದು ತಿಳಿದು ಬಂದಿದೆ, ಒಂದು ಯಾರ ಆಕ್ಷೇಪಣೆ ಇಲ್ಲದಿದ್ದರೆ ಕೂಡಲೇ ಅಲ್ಲಿಗೆ ರಸ್ತೆ ನಿರ್ಮಾಣಕ್ಕೆ ಬೇಕಾಗುವ ಅನುದಾನವನ್ನು ಶಾಸಕರು ಅಥವಾ ಸಂಸದರ ಮೂಲಕ ನೀಡಲು ನಾವು ಬದ್ಧ. ಮೊದಲು ಜಾಗದ ಸಮಸ್ಯೆಯನ್ನು ಬಗೆಹರಿಸಬೇಕಾಗುತ್ತದೆ ಎಂದು ಕೃಷ್ಣ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.

Also Read  ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ► ಸಾಧಕ ಮಹಿಳೆಯರಿಂದ ಅರ್ಜಿ ಆಹ್ವಾನ

ಈ ಬಗ್ಗೆ ತಾ.ಪಂ. ಸದಸ್ಯ ಫಝಲ್ ಕೋಡಿಂಬಾಳ ಪ್ರತಿಕ್ರಿಯೆ ನೀಡಿ, ಓಂತ್ರಡ್ಕ ಸಮೀಪದ ಪಾದರೆ ಎಂಬಲ್ಲಿಗೆ ರಸ್ತೆ ಇಲ್ಲದಿರುವುದು ಗಂಭೀರ ಸಮಸ್ಯೆ ಹೌದು, ಆದರೆ ಈ ಬಗ್ಗೆ ಹಿಂದೆ ನಾವು ಮಾತುಕತೆ ಮಾಡಲು ಪ್ರಯತ್ನ ಪಟ್ಟಾಗ ಅಲ್ಲಿ ಪೈಪು ಲೈನಿನ ವಿಚಾರವಾಗಿ ಗಲಾಟೆ ಆಗಿತ್ತು. ಬಳಿಕ ಈ ಮಾತುಕತೆ ಅಲ್ಲಿಗೆ ನಿಂತಿತ್ತು. ಜಾಗದ ಸಮಸ್ಯೆ ಬಗೆಹರಿದರೆ ತಾ.ಪಂ.ನಿಂದ ಅನುದಾನ ನೀಡಲು ನಾನು ಬದ್ಧನಾಗಿದ್ದು, ಈ ಬಗ್ಗೆ ಅಲ್ಲಿನ ನಿವಾಸಿಗಳು ಪಟ್ಟಾ ಜಾಗದವರೊಂದಿಗೆ ಮಾತುಕತೆ ನಡೆಸಲು ಸಹಕರಿಸಿದರೆ ಮಾತುಕತೆ ನಡೆಸುವ ಬಗ್ಗೆ ಪ್ರಯತ್ನಪಡಲಾಗುವುದು ಎಂದು ಫಝಲ್ ಕೋಡಿಂಬಾಳ ಹೇಳಿದ್ದಾರೆ.

ಈ ಬಗ್ಗೆ ವಾರ್ಡಿನ ಪಂಚಾಯತ್ ಸದಸ್ಯ ನಾರಾಯಣ ಪೂಜಾರಿ ಪ್ರತಿಕ್ರಿಯೆ ನೀಡಿ, ರಸ್ತೆ ಆಗಬೇಕಾಗಿದ್ದು, ಆದರೆ ಜಾಗದ ಸಮಸ್ಯೆಯೇ ನಮಗೆ ಸಮಸ್ಯೆಯಾಗಿದೆ. ಮೊದಲು ಜಾಗದ ಸಮಸ್ಯೆಯನ್ನು ಬಗೆಹರಿಸಿದರೆ ಗ್ರಾ.ಪಂ. ಮತ್ತು ಎ.ಪಿ.ಎಂ.ಸಿ ಯಿಂದ ಮೋರಿ ಅಳವಡಿಕೆಗೆ ಅನುದಾನ ಖಂಡಿತಾ ನೀಡುತ್ತೇವೆ. ಅನುದಾನದ ಸಮಸ್ಯೆ ಇಲ್ಲ. ಜಾಗದ ತಕರಾರು ಸಮಸ್ಯೆಯಾಗಿದೆ ಎಂದು ನಾರಾಯಣ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.

Also Read  ಆರ್ಥಿಕ ಸಂಕಷ್ಟವೇ ಮುಳುವಾಯ್ತು ➤ ಬೋಟ್ ನಲ್ಲಿ ನೇಣು ಹಾಕಿಕೊಂಡ ಯುವಕ

 

 

error: Content is protected !!
Scroll to Top