(ನ್ಯೂಸ್ ಕಡಬ) newskadaba.com ಬೆಳಗಾವಿ, ನ.23. ತಾನು ಹಿಂದಿನ ಚುನಾವಣೆಯಲ್ಲಿ ಗೆಲ್ಲಲು ವಾಮಾಚಾರದ ಮೊರೆ ಹೋಗಿದ್ದೆ. ಆದರೆ ಚುನಾವಣೆಯಲ್ಲಿ ಅಂದು ಗೆಲ್ಲದೇ 1.50 ಲಕ್ಷ ಕಳೆದುಕೊಂಡಿದ್ದಾಗಿ ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ ಹೇಳಿದರು.
ಅವರು ಬುಧವಾರದಂದು ವಿಧಾನ ಪರಿಷತ್ ನಲ್ಲಿ, ಮೌಢ್ಯ ನಿಷೇಧ ಕಾಯ್ದೆಯ ಬಗ್ಗೆ ಚರ್ಚೆ ವೇಳೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಹಲವು ವರ್ಷಗಳ ಹಿಂದಿನ ಮಾತನ್ನು ಬುಧವಾರದಂದು ಬಾಯಿ ಬಿಟ್ಟರು. ನಾನು ಚುನಾವಣೆಗೆ ನಿಂತುಕೊಂಡಾಗ, ಅಂದು ನನ್ನ ಬಳಿ ಇದ್ದ ಸಹಾಯಕರು ವಾಮಾಚಾರ ಮಾಡಿಸಿದರೆ ಗೆಲುವು ನಿಶ್ಚಿತವಾಗಿದ್ದು, ವಾಮಾಚಾರ ಮಾಡಿಸಿ ಎಂದು ಒತ್ತಡ ಹೇರಿದ್ದರು. ಅವರ ಒತ್ತಡಕ್ಕೆ ಮಣಿದ ನಾನು ಒಬ್ಬ ಸ್ವಾಮೀಜಿ ಬಳಿ ತೆರಳಿ ವಾಮಾಚಾರ ಮಾಡಿಕೊಟ್ಟಿದ್ದಕ್ಕೆ ಅವರಿಗೆ ತಾನು 1.50 ಲಕ್ಷ ಹಣ ಕೊಟ್ಟಿದ್ದು, ಆದರೆ ಆ ಬಾರಿಯ ಚುನಾವಣೆಯಲ್ಲಿ ತಾನು ಗೆಲ್ಲಲಿಲ್ಲ. ಸೋಲುಂಡು ಹಣವನ್ನು ಕಳೆದುಕೊಳ್ಳುವಂತಾಯಿತು. ನನ್ನ ಪಾಡೇ ಹೀಗೆ ಆಗಿರುವಾಗ ಇನ್ನು ರಾಜ್ಯದ ಜನರ ಪಾಡೇನು ಎಂದು ಪ್ರಶ್ನಿಸಿದ ಐವನ್, ಇಂತಹ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ಬರಬೇಕು ಎಂದು ಹೇಳಿದರು.
ಈ ಬಳಿಕ ಮಧ್ಯ ಪ್ರವೇಶಿಸಿದ ಉಗ್ರಪ್ಪ, ವಾಮಾಚಾರಕ್ಕೆ ಖರ್ಚು ಮಾಡಿದ ಹಣವನ್ನು ಚುನಾವಣೆಯ ಖರ್ಚು ವೆಚ್ಚಗಳಲ್ಲಿ ಘೋಷಣೆ ಮಾಡಿದ್ದೀಯೋ ಇಲ್ಲವೋ..? ಒಂದು ವೇಳೆ ಘೋಷಣೆ ಮಾಡದೇ ಇದ್ದರೆ ಅದು ಅಪರಾಧವಾಗುತ್ತದೆ ಎಂದ ತಕ್ಷಣ ಪ್ರತ್ಯುತ್ತರಿಸಿದ ಐವನ್ ಡಿಸೋಜಾ ಎಲ್ಲ ಖರ್ಚು ವೆಚ್ಚಗಳನ್ನು ಆಯೋಗಕ್ಕೆ ನೀಡಿದ್ದೇನೆ.
ನಮ್ಮಂತವರೇ ಮೋಸ ಹೋಗಿರುವಾಗ ಬಡವರು ಮೋಸ ಹೋಗದೇ ಇರುತ್ತಾರಾ? ಹೀಗಾಗಿ ಈ ಸರ್ಕಾರದ ಮೌಢ್ಯ ನಿಷೇಧ ಮಸೂದೆಗೆ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ. ಇಂತಹ ವಿಚಾರಗಳಿಂದ ಯುವ ಜನತೆ ದೂರ ಉಳಿಯಬೇಕು ಎಂದು ಹೇಳಿದರು.