(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 12. ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರನ್ನು ಬಂಟ್ವಾಳ ಸಂಚಾರಿ ಪೊಲೀಸರು ಪತ್ತೆ ಹಚ್ಚಿದ್ದು, ಸ್ವಿಫ್ಟ್ ಕಾರು ಸಹಿತ ಚಾಲಕನನ್ನು ವಶಕ್ಕೆ ಪಡೆದ ಘಟನೆ ಬಿ ಸಿ ರೋಡಿನ ತಲಪಾಡಿ ಎಂಬಲ್ಲಿ ನಡೆದಿದೆ.
ಬಂಧಿತನನ್ನು ಮೊಹಮ್ಮದ್ ಶೇಖ್ ಫೈಝಲ್ ಎಂದು ಗುರುತಿಸಲಾಗಿದೆ. ಈತ ಡಿ. 05ರಂದು ಬೆಳಗ್ಗೆ ಬಿ.ಸಿ.ರೋಡಿನ ತಲಪಾಡಿಯಲ್ಲಿ ತನ್ನ ಕಾರನ್ನು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ. ಘಟನೆಯಲ್ಲಿ ರಿಕ್ಷಾ ಚಾಲಕ ಹಾಗೂ ಪ್ರಯಾಣಿಕ ಗಾಯಗೊಂಡಿದ್ದರು. ಆರೋಪಿಯು ತಪ್ಪಿಸಿಕೊಳ್ಳವ ದೃಷ್ಟಿಯಿಂದ ಅಪಘಾತದ ಬಳಿಕ ಮುಂದೆ ಸಾಗದೇ ಕಾರನ್ನು ತಿರುಗಿಸಿ ಬಿ.ಸಿ ರೋಡ್ ಗೆ ಬಂದು ಪರಾರಿಯಾಗಿದ್ದನು. ಪೊಲೀಸರು ಸಾಕಷ್ಟು ನಿಗಾ ವಹಿಸಿ ಅನೇಕ ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನು ವೀಕ್ಷಿಸಿ ಕಾರಿನ ನೋಂದಣಿ ಸಂಖ್ಯೆಯನ್ನು ಪತ್ತೆಹಚ್ಚಿ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.