(ನ್ಯೂಸ್ ಕಡಬ) newskadaba.com ಕಡಬ, ನ.22. ಕೊಯಿಲ ಗ್ರಾ.ಪಂ. ಮಕ್ಕಳ ಗ್ರಾಮಸಭೆಯು ಗ್ರಾ.ಪಂ. ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು. ಆತೂರು ಬದ್ರಿಯಾ ಶಾಲಾ ನಾಯಕ ಮೊಹಮ್ಮದ್ ಮುಹಸೀನ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಕೊಯಿಲ ಗ್ರಾ.ಪಂ.ವ್ಯಾಪ್ತಿಯ ವಳಕಡಮ ಕಿ.ಪ್ರಾ.ಶಾಲೆ, ಗಂಡಿಬಾಗಿಲು ಹಿ.ಪ್ರಾ.ಶಾಲೆ, ಕೊಯಿಲ ಹಿ.ಪ್ರಾ.ಶಾಲೆ ಹಾಗೂ ಸಬಳೂರು ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳು ಭಾಗವಿಸಿದ್ದು ವಿವಿಧ ಬೇಡಿಕೆಗಳನ್ನು ಮಂಡಿಸಿದ್ದಾರೆ.
ಆತೂರು ಬದ್ರಿಯಾ ಶಾಲೆಯ ವಿದ್ಯಾರ್ಥಿ ಮಾತನಾಡಿ, ಶಾಲೆಗೆ ಕಸದಬುಟ್ಟಿ ಕೊಟ್ಟಿದ್ದು ಇದರಲ್ಲಿ ಕಸ ತುಂಬಿದೆ. 1 ವರ್ಷವಾದರೂ ವಿಲೇವಾರಿ ಆಗಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಗ್ರಾ.ಪಂ.ಸದಸ್ಯ ಕೆ.ಎ.ಸುಲೈಮಾನ್ರವರು, 2006ರಲ್ಲಿ ಗ್ರಾ.ಪಂ.ಬಂದ ನಿರ್ಮಲಾ ಗ್ರಾಮ ಪುರಸ್ಕಾರದ ಅನುದಾನದಲ್ಲಿ ಶಾಲೆಗಳಿಗೆ ಕಸದಬುಟ್ಟಿ ಕೊಡಲಾಗಿದೆ. ಇದರಲ್ಲಿ ತುಂಬಿದ ಕಸವನ್ನು ಗ್ರಾ.ಪಂ.ವಿಲೇವಾರಿ ಮಾಡುವುದಿಲ್ಲ. ಶಾಲೆಯವರೇ ವಿಲೇವಾರಿ ಮಾಡಬೇಕೆಂದು ಸೂಚಿಸಲಾಗಿದೆ. ಈ ಬಗ್ಗೆ ಲಿಖಿತವಾಗಿ ಪಡೆದುಕೊಂಡ ಬಳಿಕವೇ ಕಸದ ಬುಟ್ಟಿ ನೀಡಲಾಗಿದೆ. ಆದ್ದರಿಂದ ಶಾಲೆಯ ಆಡಳಿತ ಮಂಡಳಿಯೇ ಕಸದ ಸೂಕ್ತ ವಿಲೇವಾರಿ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಆತೂರಿನಲ್ಲಿರುವ ಬಸ್ನಿಲ್ದಾಣ ಸ್ವಚ್ಛವಿಲ್ಲ. ಇದರ ಸುತ್ತಲೂ ಕಸಕಡ್ಡಿ ತುಂಬಿಕೊಂಡಿದ್ದು ಹುಲ್ಲು ಬೆಳೆದಿದೆ. ಇದನ್ನು ಸ್ವಚ್ಛಗೊಳಿಸಬೇಕೆಂದು ಬದ್ರಿಯಾ ಶಾಲಾ ಮಕ್ಕಳು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ಮೀನಾಕ್ಷಿಯವರು, ಸದ್ರಿ ಬಸ್ನಿಲ್ದಾಣವು ರಾಮಕುಂಜ ಗ್ರಾ.ಪಂ.ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ನೀವು ಈ ಬಗ್ಗೆ ರಾಮಕುಂಜ ಗ್ರಾ.ಪಂ.ಗೆ ಮನವಿ ಸಲ್ಲಿಸಿ ಎಂದರು. ಆತೂರಿನಲ್ಲಿ ಬ್ಯಾರಿಕೇಡ್ ನಿಮರ್ಿಸುವಂತೆಯೂ ಮಕ್ಕಳು ಆಗ್ರಹಿಸಿದರು.
ಸಬಳೂರು ಶಾಲೆಗೆ ರಂಗಮಂದಿರ ನಿರ್ಮಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ಮೀನಾಕ್ಷಿಯವರು, ಸಬಳೂರು ಶಾಲೆಗೆ ರಂಗಮಂದಿರ ನಿರ್ಮಾಣಕ್ಕೆ ಜಿ.ಪಂ.ನಿಂದ 2 ಲಕ್ಷ ರೂ.ಅನುದಾನ ಬಂದಿದೆ ಎಂದರು. ತ್ರಿವೇಣಿ ಸರ್ಕಲ್ ಬಳಿ ರಸ್ತೆಯ ಎರಡು ಬದಿ ಹುಲ್ಲು ಬೆಳೆದಿದ್ದು ವಾಹನ ಓಡಾಟಕ್ಕೆ ತೊಂದರೆಯಾಗುತ್ತಿದೆ. ಹುಲ್ಲುಗಳ ಕಟಾವಿಗೆ ಕ್ರಮ ಕೈಗೊಳ್ಳುವಂತೆಯೂ ವಿದ್ಯಾರ್ಥಿಗಳು ಆಗ್ರಹಿಸಿದರು. ಕುಟೀರದ ಮೇಲ್ಛಾವಣಿ ದುರಸ್ತಿ, ಗ್ರಂಥಾಲಯಕ್ಕೆ ಪುಸ್ತಕ, ಕ್ರೀಡಾ ಸಾಮಾಗ್ರಿ, ದೈಹಿಕ ಶಿಕ್ಷಣ ಶಿಕ್ಷಕರ ನೇಮಕಗೊಳಿಸುವಂತೆ ಸಬಳೂರು ಶಾಲಾ ಮಕ್ಕಳು ಆಗ್ರಹಿಸಿದರು.
ಕೊಲ ಶಾಲೆಗೆ ಬರುವ ರಸ್ತೆ ನಾದುರಸ್ತಿಯಲ್ಲಿದ್ದು ಅದರ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಅಲ್ಲಿನ ಮಕ್ಕಳು ಆಗ್ರಹಿಸಿದರು. ಸದ್ರಿ ರಸ್ತೆಯು ಕೊಲ ಪಶುಸಂಗೋಪನಾ ಇಲಾಖೆ ಜಾಗದಲ್ಲಿ ಹಾದು ಹೋಗುತ್ತಿದೆ. ಅವರ ಅವಕಾಶ ನೀಡಿದಲ್ಲಿ ದುರಸ್ತಿಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಗ್ರಾ.ಪಂ.ಆಡಳಿತ ಮಂಡಳಿ ಭರವಸೆ ನೀಡಿದೆ. ಶಾಲೆಯಲ್ಲಿ ಸೋಲಾರ್ದೀಪ ಅಳವಡಿಸುವಂತೆ ಶಾಲಾ ಮಕ್ಕಳ ಪ್ರಶ್ನೆಗೆ ಪೂರಕವಾಗಿ ಮಾತನಾಡಿದ ಮುಖ್ಯಶಿಕ್ಷಕ ಕುಶಾಲಪ್ಪ ಗೌಡರವರು, ಬೆಳಕು ಇಲ್ಲದೇ ಇದ್ದಲ್ಲಿ ರಾತ್ರಿ ವೇಳೆ ಶಾಲಾ ಆವರಣದ ದುರುಪಯೋಗ ಆಗುತ್ತದೆ. ಇತ್ತೀಚೆಗೆ ಶಾಲಾ ಆವರಣ ಸ್ವಚ್ಛಗೊಳಿಸುವ ವೇಳೆ ಬಿಯರ್ ಬಾಟ್ಲಿಗಳೂ ಸಿಕ್ಕಿವೆ ಎಂದರು. ಆವರಣಗೋಡೆ, ಮೈಕಸೆಟ್, ಬ್ಯಾಂಡ್ಸೆಟ್ ನೀಡುವಂತೆಯೂ ಮಕ್ಕಳು ಆಗ್ರಹಿಸಿದರು.
ವಳಕಡಮ ಶಾಲೆಗೆ ಹೋಗಲು ಕೊನೆಮಜಲು ಸಮೀಪ ತೋಡು ದಾಟಿ ಬರಬೇಕಾಗುತ್ತದೆ. ಮಳೆಗಾಲದಲ್ಲಿ ತೋಡು ದಾಟಿ ಬರುವುದು ಕಷ್ಟವಾಗುತ್ತದೆ. ಆದ್ದರಿಂದ ಇಲ್ಲಿ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ವಳಕಡಮ ಕಿ.ಪ್ರಾ.ಶಾಲಾ ವಿದ್ಯಾರ್ಥಿಗಳು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ಮೀನಾಕ್ಷಿಯವರು, ಇಲ್ಲಿ ಕಾಲುಸೇತುವೆ ನಿರ್ಮಾಣಕ್ಕೆ ಅನುದಾನ ಇಡಲಾಗಿದೆ ಎಂದು ಹೇಳಿದರು.
ಕೊಯಿಲ ಶಾಲಾ ಮುಖ್ಯಶಿಕ್ಷಕ ಕುಶಾಲಪ್ಪ ಗೌಡ, ಅಂಗನವಾಡಿ ಮೇಲ್ವಿಚಾರಕಿ ಸುಜಾತ, ಆರೋಗ್ಯ ಸಹಾಯಕಿ ಸೂನಮ್ಮ ಮಾಹಿತಿ ನೀಡಿದರು. ಗ್ರಾ.ಪಂ.ಅಧ್ಯಕ್ಷೆ ಮೀನಾಕ್ಷಿ ಸಂದರ್ಭೋಚಿತವಾಗಿ ಮಾತನಾಡಿದರು. ಉಪಾಧ್ಯಕ್ಷೆ ವಿಜಯ ಎಸ್., ಸದಸ್ಯರುಗಳಾದ ಲಲಿತಾ, ಸುಜಾತ ಶೆಟ್ಟಿ, ಹೇಮಾ, ಹರಿಣಿ, ನಝೀರ್ ಪೂರಿಂಗ, ವಳಕಡಮ ಶಾಲಾ ನಾಯಕಿ ಶ್ರಾವ್ಯ, ಗಂಡಿಬಾಗಿಲು ಶಾಲಾ ನಾಯಕ ದೇವಿಪ್ರಸಾದ್, ಕೊಲ ಶಾಲಾ ನಾಯಕ ಅಭಿಷೇಕ್, ಸಬಳೂರು ಶಾಲಾ ನಾಯಕಿ ಫಾತಿಮತ್ ಸಫ್ರೀನಾ ಉಪಸ್ಥಿತರಿದ್ದರು. ಕೊಲ ಶಾಲಾ ವಿದ್ಯಾರ್ಥಿನಿ ಪವಿತ್ರ ಸ್ವಾಗತಿಸಿದರು. ಗ್ರಾ.ಪಂ.ಸದಸ್ಯ ಕೆ.ಎ.ಸುಲೈಮಾನ್ ವಂದಿಸಿದರು. ಗಂಡಿಬಾಗಿಲು ಶಾಲಾ ವಿದ್ಯಾರ್ಥಿನಿ ಹಫರ್ಾನ ಕಾರ್ಯಕ್ರಮ ನಿರೂಪಿಸಿದರು.