ದ.ಕ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ- ಹೆಸರು ಸೇರ್ಪಡೆಗೆ ಇಂದಿನಿಂದ ವಿಶೇಷ ಅಭಿಯಾನ ➤ ಜಿಲ್ಲಾಧಿಕಾರಿ ರವಿಕುಮಾರ್

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 02. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಹೊಸ ಮತದಾರರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಡಿ.3 ಮತ್ತು 4ರಂದು ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಡಿ.8ರ ವರೆಗೆ ಹಕ್ಕು ಮತ್ತು ಆಕ್ಷೇಪಣೆಯ ಸಮಯದಲ್ಲಿ ಮನೆ ಮನೆ ಸಮೀಕ್ಷೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ತಿಳಿಸಿದರು.

 

ಡಿ. 26ರೊಳಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಾಗುವುದು. 2023ರ ಜನವರಿ 5ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ. ಶನಿವಾರ ಮತ್ತು ಭಾನುವಾರ ನಡೆಯಲಿರುವ ವಿಶೇಷ ನೋಂದಣಿ ಅಭಿಯಾನದ ಮೂಲಕ ಅರ್ಹ ಮತದಾರರು ತಮ್ಮ ಹೆಸರು ಸೇರ್ಪಡೆಗೊಳಿಸಬಹುದು. ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಕಾಲೇಜು ಆಡಳಿತ ಮಂಡಳಿಗಳು ಮತದಾರರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು. ಈ ಮೊದಲು ಜನವರಿ 1ರೊಳಗೆ 18 ವರ್ಷ ಪೂರ್ಣಗೊಳಿಸಿದವರ ಹೆಸರನ್ನು ಮಾತ್ರ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಅವಕಾಶವಿತ್ತು. ಪ್ರಸ್ತುತ 17 ವರ್ಷ ತುಂಬಿದ ಯುವಕರು ಒಂದು ವರ್ಷ ಮುಂಚಿತವಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಅದರಂತೆ ವರ್ಷದಲ್ಲಿ ನಾಲ್ಕು ಅರ್ಹತಾ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಮುಂಚಿತವಾಗಿ ಅರ್ಜಿ ಸಲ್ಲಿಸಿದವರನ್ನು ಜನವರಿ 1, ಎಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1ರ ಅರ್ಹತಾ ದಿನಾಂಕಕ್ಕೆ 18 ವರ್ಷಗಳನ್ನು ಪೂರ್ಣಗೊಳಿಸುವ ಮತದಾರರನ್ನು ಪಟ್ಟಿಗೆ ಸೇರ್ಪಡೆ ಮಾಡಲಾಗುವುದು. ಆ ಪ್ರಕಾರ 17 ವರ್ಷ ದಾಟಿದ ಅರ್ಜಿದಾರರು ನಮೂನೆ 6ರಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಅವರು ಹೇಳಿದರು. ಮತದಾನದ ಸಂದರ್ಭ ಯಾವುದೇ ರೀತಿಯ ಆಕ್ಷೇಪಣೆ, ದೂರುಗಳಿಗೆ ಅವಕಾಶವಿರುವುದಿಲ್ಲ. ಹಾಗಾಗಿ ಡಿ. 8ರೊಳಗೆ ಎಲ್ಲ ಮತದಾರರು ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಾತರಿಪಡಿಸಬೇಕು. ಹೆಸರು ಬಿಟ್ಟುಹೋಗಿದ್ದರೆ, ತಿದ್ದುಪಡಿ, ಆಕ್ಷೇಪಣೆ ಇದ್ದಲ್ಲಿ ತಮ್ಮ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳ ಮೂಲಕ ಸಲ್ಲಿಸಬಹುದು. ವೆಬ್‍ಪೋರ್ಟಲ್ ceokarnataka.kar.nic.in ನಲ್ಲಿಯೂ ಮತದಾರರು ಪರಿಶೀಲನೆ ನಡೆಸಬಹುದು. ಮತದಾರರ ಜಿಲ್ಲಾ ಸಹಾಯವಾಣಿ 1950ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಹೇಳಿದರು.

Also Read   ಮಸ್ತಕಾಭಿಷೇಕಕ್ಕೆ ಲೋಕೋಪಯೋಗಿ ಇಲಾಖೆಯಿಂದ ಮೂಲಭೂತ ಸೌಕರ್ಯ ➤ ಇಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರ ಸ್ವಾಮಿಯವರಿಂದ ಲೋಕಾರ್ಪಣೆ

ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿ ರಾಜಕೀಯ ಪಕ್ಷಗಳ ಸಹಿತ ಯಾರಿಂದಲೂ ಇದುವರೆಗೆ ಯಾವುದೇ ದೂರು ಬಂದಿಲ್ಲ. ಬಿಎಲ್‍ಒಗಳು ಪರಿಷ್ಕರಣೆಗೆ ತೆರಳಿಸುವ ಸಂದರ್ಭ ಸೂಕ್ತ ವಿಧಾನದ ಮೂಲಕ ಮರಣ ಆಗಿರುವ, ಹೊರ ದೇಶಗಳಲ್ಲಿರುವ ಮತದಾರರ ಹೆಸರನ್ನು ಪರಿಷ್ಕರಣೆ ಮಾಡಿದ್ದಾರೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ವಸತಿ ಸಮುಚ್ಛಯಗಳಿಗೆ ತೆರಳಿದಾಗ ಅಲ್ಲಿನ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ವರದಿಯಾಗಿದ್ದು, ಬಿಎಲ್‍ಒಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

error: Content is protected !!
Scroll to Top