(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 01. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ಪತ್ತೆಯಾಗಿದ್ದು, ಇದರ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿಯ ಬಳಿಕವೇ ಇದು ಚರ್ಮ ರೋಗವೇ ಎಂಬುದನ್ನು ತಿಳಿಯಬಹುದು. ಅಲ್ಲಿಯವರೆಗೆ ಇದು ಶಂಕಿತ ಪ್ರಕರಣ. ಇದೀಗ ಮೇಲ್ನೋಟಕ್ಕೆ ಚರ್ಮ ರೋಗದಂತೆಯೇ ಕಂಡುಬಂದಿದೆ ಎಂದು ಸುಳ್ಯ ಪಶುಸಂಗೋಪನಾ ಇಲಾಖೆಯ ವೈದ್ಯಾಧಿಕಾರಿ ಡಾ.ನಿತಿನ್ ಪ್ರಭು ತಿಳಿಸಿದ್ದಾರೆ.
ಸುಳ್ಯ ತಾಲೂಕಿನ ಉಬರಡ್ಕ, ಆಲೆಟ್ಟಿ, ಕುಕ್ಕುಜಡ್ಕ, ಕನಕಮಜಲು ಹಾಗೂ ಅಜ್ಜಾವರ ಗ್ರಾಮಗಳಲ್ಲಿ ಒಂದೊಂದು ಜಾನುವಾರುಗಳಲ್ಲಿ ಈ ಪ್ರಕರಣ ಪತ್ತೆಯಾಗಿದ್ದು, ಈ ಹಿನ್ನೆಲೆ ಜಿಲ್ಲಾಧಿಕಾರಿಗಳ ಮುಂದಿನ ಆದೇಶದವರೆಗೆ ಜಾನುವಾರು ಸಾಗಾಟವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ ಮತ್ತು ಜಾನುವಾರುಗಳನ್ನು ಸಾಕುವವರು ಮನೆಯಲ್ಲಿಯೇ ಕಟ್ಟಿ ಸಾಕಬೇಕು, ಮೇಯಲು ಬಿಡಬಾರದು ಎಂದು ವಿನಂತಿಸಿಕೊಂಡಿದ್ದಾರೆ.