(ನ್ಯೂಸ್ ಕಡಬ) newskadaba.com ನವದೆಹಲಿ, ಅ.19: ಭಾರತದಲ್ಲಿ ಹೊಸ-ಹೊಸ ರೂಪಾಂತರಿಯ ರೂಪದಲ್ಲಿ ಮತ್ತೆ ಕೊವಿಡ್ ಸೋಂಕು ಕಾಣಿಸಿಕೊಳ್ಳುತ್ತಿದೆ. ಭಾರತದಲ್ಲಿ ಒಮಿಕ್ರಾನ್ ಮತ್ತು ಕೊರೊನಾ ಸ್ಥಿತಿಯ ಕುರಿತಾಗಿ ಕೇಂದ್ರ ಆರೋಗ್ಯ ಸಚಿವ ಡಾ. ಮಾನ್ಸುಖ್ ಮಾಂಡವಿಯಾ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಹೊಸ ಒಮಿಕ್ರಾನ್ ರೂಪಾಂತರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ದೇಶಾದ್ಯಂತ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸುವುದು ಅಗತ್ಯವಾಗಿದೆ ಎಂದು ಆರೋಗ್ಯ ಸಚಿವಾಲಯ ನಿರ್ಧರಿಸಿದೆ.
ದೇಶಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಸೇರಿದಂತೆ ಕೊವಿಡ್ ಮಾರ್ಗಸೂಚಿಗಳನ್ನು ಮುಂದುವರೆಸುವ ಬಗ್ಗೆ ಈ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಭಾರತದಲ್ಲಿ ಒಮಿಕ್ರಾನ್ನ ಹೊಸ ರೂಪಾಂತರಿಗಳು ಪತ್ತೆಯಾಗುವ ಮೂಲಕ ಆತಂಕ ಮೂಡಿಸಿವೆ. ವೇಗವಾಗಿ ಹರಡುವ ಒಮಿಕ್ರಾನ್ ರೂಪಾಂತರಿಯ ಉಪ-ರೂಪಾಂತರಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು ಮತ್ತು ಕೊವಿಡ್ ನಿಯಮಗಳನ್ನು ದೇಶಾದ್ಯಂತ ಮುಂದುವರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಶೀಘ್ರದಲ್ಲೇ ಹೊಸ ನಿಯಮಗಳ ಆದೇಶ ಹೊರಬರಲಿದೆ.