(ನ್ಯೂಸ್ ಕಡಬ) newskadaba.com ಕಡಬ, ನ.18. ಸುಳ್ಯ ತಾಲೂಕಿನಿಂದ ಪ್ರಸ್ತಾವಿತ ಕಡಬ ತಾಲೂಕನ್ನು ಸಂಪಕರ್ಿಸುವ ಪ್ರಮುಖ ಜಿಲ್ಲಾ ರಸ್ತೆಯಾಗಿರುವ ಕಡಬ-ಪಂಜ ರಸ್ತೆಯನ್ನು ಆಗಲಗೊಳಿಸಿ ಉನ್ನತೀಕರಿಸುವ ಕಾಮಗಾರಿ ಆರಂಭಗೊಂಡಿದ್ದು, ಸುಳ್ಯ ಶಾಸಕ ಎಸ್.ಅಂಗಾರ ಅವರ ಮುತುವರ್ಜಿಯಿಂದಾಗಿ ಪರಿಸರದ ಜನರ ಬಹುಕಾಲದ ಬೇಡಿಕೆಯೊಂದು ಈಡೇರುತ್ತಿದೆ.
ಕಡಬದಿಂದ ಪಂಜ, ನಿಂತಿಕಲ್, ಬೆಳ್ಳಾರೆ ಮೂಲಕ ಸುಳ್ಯಕ್ಕೆ ಪ್ರಯಾಣಿಸುವ ಜನರಿಗೆ ಕಡಬ-ಪಂಜ ನಡುವಿನ ಪ್ರಯಾಣ ಅತ್ಯಂತ ತ್ರಾಸದಾಯಕ ಪ್ರಯಾಣ ಎನ್ನುವ ಕಾರಣದಿಂದಾಗಿ ಸದ್ರಿ ರಸ್ತೆಯ ಅಭಿವೃದ್ಧಿಗೆ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿಗಳನ್ನು ಸಲ್ಲಿಸಲಾಗಿತ್ತು. ಅಗಲ ಕಿರಿದಾದ ಸದ್ರಿ ರಸ್ತೆಯಲ್ಲಿ ವಾಹನ ಚಲಾಯಿಸಲು ವಾಹನ ಚಾಲಕರು ಹರಸಾಹಸ ಪಡಬೇಕಾಗಿತ್ತು. ಈಗಾಗಲೇ ಪಂಜದಿಂದ ಬೆಳ್ಳಾರೆ ಮೂಲಕ ಸುಳ್ಯದತ್ತ ಸಂಚರಿಸುವ ರಸ್ತೆಗಳು ಅಭಿವೃದ್ಧಿಯಾಗಿದ್ದು ಇದೀಗ ಕಡಬ-ಪಂಜ ರಸ್ತೆಯೂ ಅಭಿವೃದ್ಧಿಗೊಳ್ಳುತ್ತಿರುವುದು ಸದ್ರಿ ರಸ್ತೆಯ ಮೂಲಕ ದಿನಂಪ್ರತಿ ಸಂಚರಿಸುವ ಜನರಿಗೆ ಖುಷಿ ತಂದಿದೆ. ಕಡಬದಿಂದ ಪಂಜವನ್ನು ಸಂಪರ್ಕಿಸುವ 9.7 ಕಿ.ಮೀ. ಉದ್ದದ ರಸ್ತೆಯಲ್ಲಿ ಕಡಬದಿಂದ ಕೋಡಿಂಬಾಳದ ಓಂತ್ರಡ್ಕ ಶಾಲೆಯ ತನಕ (2.4 ಕಿ.ಮೀ) ರೂ. 1.2 ಕೋಟಿ ಅನುದಾನದಲ್ಲಿ ರಸ್ತೆಯನ್ನು ಈಗಾಗಲೇ ಅಗಲಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಇದೀಗ 5.7 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಗೊಳಿಸಿಲು 4 ಕೋಟಿ ರೂ. ಅನುದಾನ ಬಿಡುಗಡೆಯಾಗಿ ಕಾಮಗಾರಿ ಆರಂಭಗೊಂಡಿದೆ. ಸದ್ರಿ ಕಾಮಗಾರಿ ಮುಗಿಯುವ ವೇಳೆಗೆ ಪಂಜವನ್ನು ಸೇರುವ ಹಂತದಲ್ಲಿ ಬಾಕಿ ಉಳಿಯುವ 1.5 ಕಿ.ಮೀ. ರಸ್ತೆಯನ್ನು ಆಗಲಗೊಳಿಸಿ ಅಭಿವೃದ್ಧಿಪಡಿಸುವುದಕ್ಕಾಗಿ 1 ಕೋಟಿ ರೂ. ಅನುದಾನ ವ್ಯವಸ್ಥೆಗೊಳಿಸಲಾಗುವುದು ಎಂದು ಶಾಸಕ ಅಂಗಾರ ಅವರು ತಿಳಿಸಿದ್ದಾರೆ.
ಈಗಾಗಲೇ ಕಳೆದ ಅವಧಿಯಲ್ಲಿ ಕಡಬದಿಂದ ಕೋಡಿಂಬಾಳದ ಮಡ್ಯಡ್ಕದ ತನಕ ಕಡಬ-ಪಂಜ ರಸ್ತೆಯನ್ನು ಅಗಲಗೊಳಿಸಿ ಅಭಿವೃದ್ಧಿಗೊಳಿಸಲಾಗಿದೆ. ಇನ್ನು ಬಾಕಿ ಉಳಿದಿರುವ 7.2 ಕಿ.ಮೀ. ಉದ್ದದ ರಸ್ತೆಯನ್ನು ಒಟ್ಟು 5 ಕೋಟಿ ರೂ. ಅನುದಾನದಲ್ಲಿ ಅಗಲಗೊಳಿಸಿ, ಏರು ರಸ್ತೆಯನ್ನು ತಗ್ಗುಗೊಳಿಸಿ, ತಿರುವುಗಳನ್ನು ಸರಿಪಡಿಸಿ ಅಭಿವೃದ್ಧಿಪಡಿಸಲಾಗುವುದು. ಈಗಾಗಲೇ 4 ಕೋಟಿ. ರೂ. ಅನುದಾನ ಬಿಡುಗಡೆಯಾಗಿ ಕಾಮಗಾರಿ ಆರಂಭಗೊಂಡಿದೆ. ಪಂಜ ಕಡೆಯಿಂದ ಬಾಕಿ ಉಳಿಯುವ 1.5 ಕಿ.ಮೀ. ಉದ್ದ ರಸ್ತೆಯನ್ನು ಅಭಿವೃದ್ಧಿಗೊಳಿಸಲು 1 ಕೋಟಿ. ರೂ. ಅನುದಾನ ಶೀಘ್ರ ಬಿಡುಗಡೆಯಾಗಲಿದೆ.
-ಎಸ್.ಅಂಗಾರ, ಸುಳ್ಯ ಶಾಸಕರು
ರಸ್ತೆಯಲ್ಲಿನ ತಿರುವುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ನೇರಗೊಳಿಸಿ ಏರು ರಸ್ತೆಯನ್ನು ತಗ್ಗುಗೊಳಿಸಿ 5.5 ಮೀ. ಅಗಲದ ರಸ್ತೆ ನಿರ್ಮಿಸಲಾಗುವುದು. ಕೋಡಿಂಬಾಳ ಮತ್ತು ಪುಳಿಕುಕ್ಕು ಸೇತುವೆಯ ನಡುವೆ ಬರುವ ಮುರಚೆಡವಿನ ತಿರುವನ್ನು ನೇರಗೊಳಿಸಿ ಏರುರಸ್ತೆಯನ್ನು ತಗ್ಗಿಸಲಾಗುವುದು. ಈಗಾಗಲೇ ಮಣ್ಣಿನ ಕೆಲಸಗಳು ಭರದಿಂದ ನಡೆಯುತ್ತಿದೆ. 3 ತಿಂಗಳೊಳಗೆ ಕಾಮಗಾರಿ ಪೂರ್ತಿಗೊಳಿಸುವ ಗುರಿ ಇರಿಸಿಕೊಳ್ಳಲಾಗಿದೆ. ರಸ್ತೆಯ ಅಕ್ಕಪಕ್ಕದಲ್ಲಿ ಜಮೀನು ಹೊಂದಿರುವವರು ಕಾಮಗಾರಿಗೆ ಪೂರಕವಾಗಿ ಸ್ಪಂದಿಸಿ ಸಹಕರಿಸಿದರೆ ಮುಂದಿನ ಜನವರಿ ತಿಂಗಳ ಕೊನೆಗೆ ಕಾಮಗಾರಿ ಮುಗಿದು ಸುಂದರ ರಸ್ತೆ ನಿರ್ಮಾಣಗೊಳ್ಳಲಿದೆ.
– ಸಣ್ಣೇಗೌಡ,
ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಾಹಕ ಇಂಜಿನಿಯರ್, ಸುಳ್ಯ
ಕಡಬ-ಪಂಜ ರಸ್ತೆ ಅಭಿವೃದ್ಧಿಗೊಳ್ಳುತ್ತಿರುವುದು ಸಂತಸದ ವಿಷಯ. ಅಗಲ ಕಿರಿದಾದ ಸದ್ರಿ ರಸ್ತೆಯಲ್ಲಿ ಸಂಚರಿಸುವುದು ಬಹಳ ತ್ರಾಸದ ವಿಚಾರವಾಗಿತ್ತು. ದ್ವಿಚಕ್ರ ವಾಹನ ಸವಾರರಂತೂ ಬಹಳ ಕಷ್ಟದಿಂದ ವಾಹನ ಚಲಾಯಿಸುವ ಪರಿಸ್ಥಿತಿ. ಪಂಜದಿಂದ ಕಡಬಕ್ಕೆ ದಿನಂಪ್ರತಿ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಸಂಚರಿಸುತ್ತಾರೆ. ಶಾಲಾ ವಾಹನಗಳು, ಸರಕಾರಿ ಬಸ್ ಹಾಗೂ ಖಾಸಗಿ ವಾಹನಗಳು ನಿರಂತರವಾಗಿ ಸಂಚರಿಸುವ ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಹಲವಾರು ಬಾರಿ ಮನವಿಗಳನ್ನು ಸಲ್ಲಿಸಲಾಗಿತ್ತು. ಇದೀಗ ರಸ್ತೆ ಆಗಲಗೊಂಡು ಅಭಿವೃದ್ಧಿಯಾಗುತ್ತಿರುವುದು ಸದ್ರಿ ರಸ್ತೆಯಲ್ಲಿ ದಿನನಿತ್ಯ ಸಂಚರಿಸುವ ನಮ್ಮಂತಹ ಉದ್ಯೋಗಿಗಳಿಗೆ ಖುಷಿ ತಂದಿದೆ.
–ಸತೀಶ್ ಪಂಜ, ಶಿಕ್ಷಕರು