(ನ್ಯೂಸ್ ಕಡಬ) newskadaba.com ಕಡಬ, ಆ. 05. ಕಳೆದ ನಾಲ್ಕೈದು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಕೊಂಬಾರಿನ ಕಚ್ಚಾ ರಸ್ತೆಯೊಂದು ಕೊಚ್ಚಿ ಹೋಗಿ ಸಂಚಾರ ಸ್ಥಗಿತಗೊಂಡಿದ್ದು, ಮಾಹಿತಿ ತಿಳಿದ ಕಡಬ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ದುರಸ್ತಿಗೆ ಸ್ಥಳೀಯಾಡಳಿತಕ್ಕೆ ಸೂಚನೆ ನೀಡಿದ್ದಾರೆ.
ಕೊಂಬಾರು ಗ್ರಾಮದ ಮರವಂಜಿ ಎಂಬಲ್ಲಿ ರಾಮಣ್ಣ ಗೌಡ ಎಂಬವರ ಮನೆಗೆ ಪಕ್ಕದ ತೋಡಿನ ನೀರು ನುಗ್ಗಿತ್ತು. ಇದೇ ಕಾರಣಕ್ಕೆ ಮನೆಯವರನ್ನು ಸ್ಥಳಾಂತರ ಮಾಡಲಾಗಿತ್ತು. ಬುಧವಾರ ರಾತ್ರಿ ಸುರಿದ ಭಾರೀ ಮಳೆಯ ಪರಿಣಾಮ ಕೊಂಬಾರು ಗ್ರಾಮದ ಪಟ್ಲೆತ್ತಿಮಾರು ಎಂಬಲ್ಲಿ ಕಚ್ಚಾ ರಸ್ತೆಯು ಸುಮಾರು ಹತ್ತು ಮೀಟರ್‌ನಷ್ಟು ಕೊಚ್ಚಿ ಹೋಗಿ ಗುಂಡಿ ನಿರ್ಮಾಣವಾಗಿದೆ. ಅಲ್ಲದೇ ಮಳೆಯ ಆರ್ಭಟಕ್ಕೆ ತೋಡಿನಲ್ಲಿ ನೀರು ತುಂಬಿ ಹರಿದು, ಕುಂಡುಕೋರಿ ಎಂಬಲ್ಲಿ ತೋಡು ತೆರೆದುಕೊಂಡು ಪಟ್ಲೆತ್ತಿಮಾರ್ ರಸ್ತೆಯ ಮೇಲೆ ಹರಿದು ಹೋಗಿ ರಸ್ತೆ ಕೊಚ್ಚಿಹೋಗಿದೆ. ಸುಂಕದಕಟ್ಟೆ-ಕೊಂಬಾರು, ಬೋಳ್ನಡ್ಕ-ಕೆಂಜಾಲ ಮುಖಾಂತರ ಗುಂಡ್ಯವನ್ನು ಸಂಪರ್ಕಿಸುವ ಈ ರಸ್ತೆ ಈಗ ಪಟ್ಲೆತ್ತಿಮರ್ ಎಂಬಲ್ಲಿ ಕಿತ್ತು ಹೋಗಿ ಈ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಪರ್ಯಾಯ ರಸ್ತೆಯ ವ್ಯವಸ್ಥೆ ದುಸ್ತರವಾಗಿರುವುದರಿಂದ ಜನತೆ ಪರದಾಡುವಂತಾಗಿದೆ. ಪಟ್ಲೆತ್ತಿಮಾರ್ ಎಂಬಲ್ಲಿ ರಸ್ತೆಯ ವಿಷಯದಲ್ಲಿ ತಗಾದೆಯಿದ್ದು, ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ದುರಸ್ತಿ ಕಾರ್ಯಕ್ಕೆ ತೊಡಕುಂಟಾಗಿದೆ. ಆದರೆ ಜನರಿಗೆ ತೊಂದರೆಯಾಗುತ್ತಿರುದರಿಂದ ದುರಸ್ತಿ ಅನಿವಾರ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಕಡಬ ತಹಸೀಲ್ದಾರ್ ಅನಂತ ಶಂಕರ್ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ದುರಸ್ತಿಗೆ ಸ್ಥಳೀಯಾಡಳಿತ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕೊಂಬಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲ ಶಿವಪ್ರಸಾದ್, ಪಿಡಿಒ ರಾಘವೇಂದ್ರ ಗೌಡ, ಗ್ರಾಮಕರಣಿಕ ಸಿರಾಜ್, ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.