ಸುಳ್ಯ: ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ

(ನ್ಯೂಸ್ ಕಡಬ) newskadaba.com ಸುಳ್ಯ , ಆ. 02. ಸುಳ್ಯ ಮತ್ತು ಕಡಬ ತಾಲೂಕಿನ ವಿವಿಧೆಡೆ ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಗ್ಗೆ ಸುರಿದ ಭಾರೀ ಮಳೆಯಿಂದಾಗಿ ಹಾನಿಗೀಡಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಭೇಟಿ ಪರಿಶೀಲನೆ ನಡೆಸಿದರು.

 

ಸುಳ್ಯದಲ್ಲಿ ಪಯಸ್ವಿನಿ ನದಿ ಉಕ್ಕಿ ಹರಿದ ಪರಿಣಾಮ ಸಂಪಾಜೆ ಗ್ರಾಮದ ಕಲ್ಲುಗುಂಡಿ ಪೇಟೆ ಸಂಪೂರ್ಣ ಜಲಾವೃತಗೊಂಡಿತ್ತು. ಕೊಯನಾಡಿನ ಗಣಪತಿ ಗುಡಿಯ ಬಳಿ ಇರುವ ಸೇತುವೆ ಬಿರುಕು ಬಿಟ್ಟಿದ್ದು, ಸುಳ್ಯ-ಮಡಿಕೇರಿ ಸಂಪರ್ಕ ರಸ್ತೆಗೆ ಕಡಿತದ ಭೀತಿ ಎದುರಾಗಿದೆ. ಅಲ್ಲದೇ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ಇನ್ನು ಸುಬ್ರಹ್ಮಣ್ಯ ಬಳಿಯ ಕಲ್ಮಕಾರಿನಲ್ಲಿ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಕಲ್ಮಕಾರು ಪೇಟೆ ಸಂಪರ್ಕಿಸುವ ಸಂತೆಡ್ಕ ಸೇತುವೆಯ ಒಂದು ಭಾಗ ತುಂಡಾಗಿ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಸುಮಾರು 150ಕ್ಕೂ ಹೆಚ್ಚು ಮನೆಗಳ ಸಂಪರ್ಕ ಕಡಿತಗೊಂಡಿದೆ. ಹರಿಹರ ಪಲ್ಲತ್ತಡ್ಕ ಪೇಟೆಗೆ ನೀರು ನುಗ್ಗಿದ ಪರಿಣಾಮ ರಸ್ತೆಯ ಬದಿಯ ಭಾಗ ಸಂಪೂರ್ಣ ಬಿರುಕು ಬಿಟ್ಟಿದ್ದಲ್ಲದೇ ನೀರಲ್ಲಿ ಕೊಚ್ಚಿ ಹೋಗಿದೆ. ಕೊಲ್ಲಮೊಗ್ರ ದೋಲನಮನೆ ಪರಿಸರದಲ್ಲಿ ಮನೆಗೆ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. ಇಲ್ಲಿ ಜಾನುವಾರೊಂದು ನೀರಿನಲ್ಲಿ ಮುಳುಗಿ ಮೃತಪಟ್ಟಿದೆ. ಗ್ರಾಮದ ಕಡಂಬಳದಲ್ಲಿ ಸೇತುವೆ ಮುರಿದು ಬಿದ್ದು, ಪೆರ್ನಾಜೆ, ಕಡಂಬಳ ಭಾಗದ 40 ಮನೆಗಳ ಸಂಪರ್ಕ ಕಡಿತಗೊಂಡಿದೆ. ಇನ್ನು ವಿವಿಧೆಡೆ ಮನೆ, ಕೃಷಿ ಹಾಗೂ ಅಂಗಡಿಗಳಿಗೂ ಹಾನಿಯುಂಟಾಗಿದೆ. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿ, ಹಾನಿಯ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.

Also Read  ಕೇಂದ್ರದಿಂದ ಅನ್ನಭಾಗ್ಯ ಯೋಜನೆ ತಡೆಯುವ ಷಡ್ಯಂತ್ರ ➤ ವಿನಯಕುಮಾರ್ ಸೊರಕೆ

error: Content is protected !!
Scroll to Top