ಕರ್ನಾಟಕ ಪತ್ರಕರ್ತರ ಸಂಘದಿಂದ ಬೆಟ್ಟಂಪಾಡಿ ಸ.ಪ್ರ.ದ.ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ, ಸೈಬರ್ ಕ್ರೈಮ್ ಮಾಹಿತಿ ಕಾರ್ಯಾಗಾರ

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 05. ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಆಶ್ರಯದಲ್ಲಿ ಬೆಟ್ಟಂಪಾಡಿ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ ಮತ್ತು ಸೈಬರ್ ಕ್ರೈಮ್ ಮಾಹಿತಿ ಕಾರ್ಯಾಗಾರ ಜು. 02ರಂದು ನಡೆಯಿತು.

ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಮೊಬೈಲ್ ಬಂದ ಬಳಿಕ ನಾವು ಸೋಷಿಯಲ್ ಮೀಡಿಯಾಗಳ ದಾಸರಾಗುತ್ತಿದ್ದೇವೆ. ಸೋಷಿಯಲ್ ಮೀಡಿಯಾ ದುರುಪಯೋಗದಿಂದ ಸಮಾಜದ ನೆಮ್ಮದಿ ಹಾಳಾಗುತ್ತಿದೆ. ಉತ್ತಮ ಸಮಾಜ ನಿರ್ಮಾಣದತ್ತ ವಿದ್ಯಾರ್ಥಿಗಳು ಚಿಂತನೆ ನಡೆಸಬೇಕು ಎಂದು ಹೇಳಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಪತ್ರಕರ್ತನ ಸಂದೇಶ ಇಡೀ ಸಮಾಜವನ್ನು ಬೆಳೆಸುತ್ತದೆ. ಕೊರೊನಾದಂತಹ ಸಂಕಷ್ಟ ಕಾಲದಲ್ಲಿಯೂ ತಮ್ಮ ಜೀವದ ಹಂಗು ತೊರೆದು ಪತ್ರಕರ್ತರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ ಎಂದು ಹೇಳಿದರು. ಬೆಟ್ಟಂಪಾಡಿ ಕಾಲೇಜಿನ ಪ್ರಾಂಶುಪಾಲ ಡಾ| ವರದರಾಜ ಚಂದ್ರಗಿರಿಯವರು ಮಾತನಾಡಿ, ಮಾಧ್ಯಮ ಎನ್ನುವುದು ದೃಶ್ಯ ಮಾಧ್ಯಮ ಹಾಗೂ ಪ್ರಿಂಟ್ ಮಾಧ್ಯಮ ಮಾತ್ರವಲ್ಲದೇ ಅದರಾಚೆಗೂ ಅನೇಕ ಅವಕಾಶಗಳನ್ನು ಕಲ್ಪಿಸಿಕೊಟ್ಟ ಕ್ಷೇತ್ರವಾಗಿದೆ ಎಂದು ಹೇಳಿದರು. ಕರ್ನಾಟಕ ಪತ್ರಕರ್ತರ ಸಂಘದ ದ.ಕ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಮಾತನಾಡಿ, ಪತ್ರಕರ್ತರಾದವರಿಗೆ ಹೆಚ್ಚಿನ ಜವಾಬ್ದಾರಿಯಿದ್ದು ಸಮಾಜವನ್ನು ತಿದ್ದುವ ತಾಕತ್ತು ಪತ್ರಕರ್ತರಲ್ಲಿರುತ್ತದೆ. ಹಾಗಾಗಿ ವಿದ್ಯಾರ್ಥಿಗಳೂ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಅವರು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಸೈಬರ್ ಅಪರಾಧಗಳ ಕುರಿತಾದ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟ ದ.ಕ. ಜಿಲ್ಲಾ ‘ಸೆನ್’ ಪೊಲೀಸ್ ಸ್ಟೇಷನ್‌ನ ಇನ್ಸ್ ಪೆಕ್ಟರ್ ಸವಿತ್ರ್ ತೇಜ್‌ರವರು ಸೈಬರ್ ಅಪರಾಧಗಳ ಕುರಿತಾದ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಅಧ್ಯಕ್ಷ ಯೂಸುಫ್ ರೆಂಜಲಾಡಿ ಮಾತನಾಡಿ, ಪತ್ರಿಕಾ ಮಾಧ್ಯಮ ರಂಗದಲ್ಲಿ ಕೆಲಸ ನಿರ್ವಹಿಸುವವರು ಅನೇಕ ಸವಾಲುಗಳ ಮಧ್ಯೆ ತಮ್ಮ ಕಾರ್ಯವನ್ನು ನಿರ್ವಹಿಸಬೇಕಾಗಿದ್ದು, ವರದಿಗಾರಿಕೆಯ ಜೊತೆಗೆ ಸಮಾಜದಲ್ಲಿ ಇತರ ವಿಷಯಗಳ ಬಗ್ಗೆಯೂ ಜಾಗೃತಿ ಮೂಡಿಸುವ ಕಾರ್ಯವನ್ನು ನಾವು ಮಾಡುತ್ತಿದ್ದೇವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸುದ್ದಿ ಬಿಡುಗಡೆ ಹಮ್ಮಿಕೊಂಡಿರುವ ‘ಲಂಚ ಭ್ರಷ್ಟಾಚಾರ ವಿರುದ್ದದ ಆಂದೋಲನ’ಕ್ಕೆ ಬೆಂಬಲವಾಗಿ ಪ್ರತಿಜ್ಞಾ ವಿಧಿ ಸ್ವೀಕಾರ ನಡೆಯಿತು. ಕರ್ನಾಟಕ ಪತ್ರಕರ್ತರ ಸಂಘದ ಬೆಂಗಳೂರು ಘಟಕದ ಕನ್ವೀನರ್ ದತ್ತಾತ್ರೇಯ ಹೆಗ್ಡೆ, ಬಂಟ್ವಾಳ ತಾಲೂಕು ಕನ್ವೀನರ್ ಲತೀಫ್ ನೇರಳಕಟ್ಟೆ, ಉದ್ಯಮಿ ರಾಜೇಶ್ ರೈ ಪರ್ಪುಂಜ, ಕಾಲೇಜಿನ ಐಕ್ಯುಎಸಿ ಸಂಚಾಲಕ ಪ್ರೊ.ಹರಿಪ್ರಸಾದ್ ಎಸ್, ಸುದ್ದಿ ಬಿಡುಗಡೆ ಪತ್ರಿಕೆಯ ಹಿರಿಯ ವರದಿಗಾರ ಉಮಾಪ್ರಸಾದ್ ರೈ ನಡುಬೈಲು, ಕಾಲೇಜಿನ ಗ್ರಂಥಪಾಲಕ ರಾಮ ಕೆ, ಕರ್ನಾಟಕ ಪತ್ರಕರ್ತರ ಸಂಘದ ಉಪಾಧ್ಯಕ್ಷೆ ಶೈಲಜಾ ಸುದೇಶ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮಿಕಾಂತ ರೈ, ಸ್ಥಾಪಕಾಧ್ಯಕ್ಷ ಉಮೇಶ್ ಮಿತ್ತಡ್ಕ ಹಾಗೂ ಸದಸ್ಯರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group