(ನ್ಯೂಸ್ ಕಡಬ) newskadaba.com ಪುತ್ತೂರು, ಜು. 05. ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿನ ಗ್ರಾಮ ಅರಣ್ಯ ಸಮಿತಿ ಕಟ್ಟಡದ ಬಾಗಿಲಿಗೆ ಹೆಬ್ಬಾವನ್ನು ಕೊಂದು ಕಟ್ಟಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪುತ್ತೂರು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿದ ಘಟನೆ ನಡೆದಿದೆ.
ಬಂಧಿತರನ್ನು ಕೊಳ್ತಿಗೆ ಗ್ರಾಮದ ಶೇಡಿಗುರಿ ನಿವಾಸಿ ಧನಂಜಯ ಮತ್ತು ಜಯ ಎಂದು ಗುರುತಿಸಲಾಗಿದೆ. ಆರೋಪಿಗಳಿಗೆ ನ್ಯಾಯಾಲಯವು ಜು.15 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಇವರು ತಮ್ಮ ಮನೆ ಬಳಿ ಬಂದಿದ್ದ ಹೆಬ್ಬಾವನ್ನು ಹಿಡಿದು ಕೊಂದು ಗ್ರಾಮ ಅರಣ್ಯ ಸಮಿತಿ ಕಟ್ಟಡದ ಬಾಗಿಲ ಬೀಗಕ್ಕೆ ಕಟ್ಟಿದ್ದರು ಎಂದು ತಿಳಿದುಬಂದಿದೆ. ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ವೈ.ಕೆ.ದಿನೇಶ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಪಿ.ಕಾರ್ಯಪ್ಪರವರ ನಿರ್ದೇಶನದಂತೆ ವಲಯ ಅರಣ್ಯಾಧಿಕಾರಿಗಳಾದ ಕಿರಣ್ ಬಿ. ಎಮ್. ಉಪವಲಯ ಅರಣ್ಯಾಧಿಕಾರಿಗಳಾದ ಲೋಕೇಶ್ ಎಸ್.ಎನ್, ಅರಣ್ಯ ರಕ್ಷಕರಾದ ದೀಪಕ್, ನಿಂಗರಾಜ್ ಮೊದಲಾದವರು ಭಾಗವಹಿಸಿದ್ದರು.