ಕರಾವಳಿಯಲ್ಲಿ ಭಾರೀ ಮಳೆಗೆ ಹೈರಾಣಾದ ಜನತೆ- ಜನಜೀವನ ಅಸ್ತವ್ಯಸ್ತ ➤ ಅಪಾರ ನಷ್ಟ

ದ.ಕ ಜಿಲ್ಲೆಯಲ್ಲಿ ಬೆಳ್ತಂಗಡಿ, ಪುತ್ತೂರು, ಸುಳ್ಯ ಸೇರಿದಂತೆ ಅನೇಕ ನಗರಗಳಲ್ಲಿ ಇಂದು ಮುಂಜಾನೆಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿರುವ ಹಿನ್ನೆಲೆ ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ನಗರದ ರಾಷ್ಟ್ರೀಯ ಹೆದ್ದಾರಿ 73ನೇ ಪಡೀಲು ಹೈವೇ ಬ್ರಿಡ್ಜ್‌ ಸಂಪೂರ್ಣ ಮುಳುಗಡೆಯಾಗಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಓವರ್‌ ಬ್ರಿಡ್ಜ್‌ ಒಳಗಡೆ ಕೂಡಾ ನೀರು ನಿಂತಿದ್ದು ವಾಹನಗಳು ಸಂಪೂರ್ಣವಾಗಿ ಮುಳುಗಿ ಹೋಗಿದೆ. ಓವರ್‌ ಬ್ರಿಡ್ಜ್‌ನ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಈ ಹಿಂದೆಯೂ ಹಲವು ಬಾರಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಸ್ಥಳೀಯರು ಅಧಿಕಾರಿಗಳಿಗೆ ಛೀಮಾರಿ ಹಾಕುತ್ತಿದ್ದಾರೆ.

 

ಇನ್ನು ಸುಳ್ಯ ಪುತ್ತೂರು ಕಡೆಗಳಲ್ಲಿ ಮಳೆಯಿಂದಾಗಿ ವಿದ್ಯುತ್ ವ್ಯತ್ಯಯಯವಾಗಿದೆ. ಅಷ್ಟೇ ಅಲ್ಲದೇ ಗಾಳಿ ಮಳೆಯ ಪರಿಣಾಮ ಮರಗಳು ರಸ್ತೆಗೆ ಉರುಳಿ ಬಿದ್ದಿದ್ದು ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ. ಪೆರ್ಮಂಕಿ-ಮಂಗಳೂರು ರಸ್ತೆಯಲ್ಲಿ ಕೂಡಾ ಮರ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ನಗರದ ಪಂಪ್ವೆಲ್, ತೊಕ್ಕೊಟ್ಟು, ಕೊಟ್ಟಾರ ಚೌಕಿ ಮತ್ತಿತರ ಕೆಲವು ಜಂಕ್ಷನ್‌ಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲಾಗದೆ ನಿಂತಿವೆ. ಘಟನಾ ಸ್ಥಳಕ್ಕೆ ಮಂಗಳೂರು ನಗರ ಪಾಲಿಕೆ ಆಯುಕ್ತರು , ಸ್ಥಳೀಯ ಕಾರ್ಪೋರೇಟರ್ ಕಿರಣ್ ಕುಮಾರ್ ಸಹಿತ ಇತರ ಅಧಿಕಾರಿಗಳು ಆಗಮಿಸಿ ಇಲ್ಲಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಸ್ಥಳೀಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕೃತಕ ನೆರೆನೀರಿನಿಂದ ಜನ ಕಂಗೆಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಂಪ್ವೆಲ್‌ನಲ್ಲಿ ಪೈಪ್‌ ಒಡೆದು ಹೋದ ಕಾರಣ ಕಾಮಗಾರಿಯನ್ನು ನಡೆಸಲಾಗುತ್ತಿದ್ದು, ವಾಹನಗಳಿಗೆ ಸರಾಗವಾಗಿ ಹೋಗಲಾಗದೇ ಸಂಚಾರ ಆಮೆಗತಿಯಲ್ಲಿ ಸಾಗಿದ್ದವು. ರಾ.ಹೆ. 75ರ ಅಡ್ಯಾರ್ ಸಮೀಪದ ‌ಕಣ್ಣೂರು ಮತ್ತು ತೊಕ್ಕೊಟ್ಟು-ಮೆಲ್ಕಾರ್ ರಸ್ತೆಯನ್ನು ಸಂಪರ್ಕಿಸುವ ಹಲವು ಕಡೆಗಳಲ್ಲೂ ಕೂಡಾ ನೀರು ನಿಂತಿದೆ. ಸ್ಮಾರ್ಟ್ ಸಿಟಿ ಯೋಜನೆಯ ಅವೈಜ್ಞಾನಿಕ‌ ಕಾಮಗಾರಿಯಿಂದಾಗಿ ನಗರದ ಹಲವು ಕಡೆಗಳಲ್ಲೂ ನೀರು ತುಂಬಿಕೊಂಡಿದ್ದು, ಪಾದಚಾರಿಗಳಿಗೆ, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಮಂಗಳೂರಿನ ಗ್ರಾಮೀಣ ಪ್ರದೇಶಗಳಲ್ಲಿ ಹಲವು ತೋಟಗಳಿಗೆ ಅಪಾರವಾಗಿ ನೀರು ನುಗ್ಗಿದೆ. ಇನ್ನೂ ಕೆಲವೆಡೆ ಅಡಿಕೆ ಹಾಗೂ ತೆಂಗಿನ ಮರ ಕೂಡಾ ಉರುಳಿಬಿದ್ದಿದ್ದು ಕೃಷಿಕರಿಗೆ ಅಪಾರ ಮಟ್ಟದ ನಷ್ಟ ಸಂಭವಿಸಿದೆ. ಧಾರಾಕಾರ ಮಳೆ ಪರಿಣಾಮ ಭೂಕುಸಿತ ಸಂಭವಿಸಿ, ರೈಲು ಸಂಚಾರಕ್ಕೆ ತೊಂದರೆಯಾಗುವುದರಿಂದ ಪ್ರಯಾಣಿಕರ ಸುರಕ್ಷತೆಯ ದೃಷ್ಠಿಯಿಂದ ರೈಲು ಸಂಚಾರ ನಿರ್ಬಂಧ ಮಾಡಲಾಗಿದೆ. ಮಂಗಳೂರು -ಪಡೀಲ್ ಹಾಗೂ ಸುಬ್ರಹ್ಮಣ್ಯ-ಮಂಗಳೂರು ಕಡೆಗೆ ಸಂಚರಿಸುವ ರೈಲು ಪ್ರವೇಶವನ್ನು ನಿರ್ಬಂಧಿಸಲಾಗಿದೆ.

error: Content is protected !!

Join the Group

Join WhatsApp Group