ನಾಡಪ್ರಭು ಕೆಂಪೇಗೌಡರು ಸದಾ ಸ್ಮರಣೀಯರು ➤ ವೇದವ್ಯಾಸ ಕಾಮತ್

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 28. ಇಪ್ಪತ್ತಮೂರು ವರ್ಷಗಳ ಆಡಳಿತ ನಡೆಸಿ, ಇಂದಿನ ಬಹುದೊಡ್ಡ ಸುಸಜ್ಜಿತ ನಗರವೊಂದಕ್ಕೆ ಶಾಶ್ವತ ಭದ್ರಬುನಾದಿ ಹಾಕಿದ ನಾಡಪ್ರಭು ಕೆಂಪೇಗೌಡರು ಸದಾ ಸ್ಮರಣೀಯರು ಎಂದು ಶಾಸಕರಾದ ವೇದವ್ಯಾಸ್ ಕಾಮತ್ ಅವರು ಅಭಿಪ್ರಾಯಪಟ್ಟರು.

ಅವರು ಸೋಮವಾರ ನಗರದ ತುಳು ಭವನದ ಸಿರಿ ಚಾವಡಿ ಸಭಾ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ನಾಡಪ್ರಭು ಕೆಂಪೇಗೌಡ ಜಯಂತಿಗೆ ಚಾಲನೆ ನೀಡಿ ಮಾತನಾಡಿದರು. ಶಿಸ್ತುಬದ್ಧ ಆಡಳಿತ, ಯೋಜನೆ-ಯೋಚನೆಗಳ ಮೂಲಕ ಬಾಲ್ಯದಲ್ಲಿ ಕಂಡ ಜನಪರ ಕನಸನ್ನು ನನಸಾಗಿಸಲು ಕೆಂಪೇಗೌಡರ ತ್ಯಾಗ ಹಾಗೂ ಶ್ರಮವನ್ನು ನೆನಪು ಮಾಡಿಕೊಳ್ಳಬೇಕು. ಮೂಲಭೂತ ಸೌಕರ್ಯ, ನಗರಾಭಿವೃದ್ಧಿ, ಕೃಷಿ, ನೀರಾವರಿ, ಕೆರೆಗಳ ಅಭಿವೃದ್ಧಿ ಸೇರಿದಂತೆ ಹತ್ತು ಹಲವು ಜನಪ್ರಯೋಜಿತ ಯೋಜನೆಗಳನ್ನು ಕೆಂಪೇಗೌಡರು ಜಾರಿಗೆ ತಂದರು. ಜತೆಗೆ ತಮ್ಮ ಕೊನೆಯ ದಿನಗಳವರೆಗೂ ಅವುಗಳಿಗೆ ಚ್ಯುತಿ ಬಾರದಂತೆ ಸಮರ್ಥವಾಗಿ ಆಡಳಿತ ನಡೆಸಿ, ತಮ್ಮ 23 ವರ್ಷಗಳ ಆಡಳಿತಾವಧಿಯಲ್ಲಿ ಬಹುದೊಡ್ಡ ಸುಸಜ್ಜಿತ ನಗರವೊಂದಕ್ಕೆ ಶಾಶ್ವತ ಭದ್ರಬುನಾದಿ ಹಾಕಿದರು ಎಂದು ಹೇಳಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಮಾತನಾಡಿ, ವಿಶ್ವದ ಹಲವು ನಗರಗಳ ನಡುವೆ ಆಧುನಿಕವಾಗಿ, ವೈಜ್ಞಾನಿಕವಾಗಿ ಹಾಗೂ ಆಕರ್ಷಣೀಯ ನಗರವಾಗಿ ಬೆಂಗಳೂರು ಇಂದು ಬೆಳೆದು ನಿಂತಿರುವುದಕ್ಕೆ ಬಹು ಮುಖ್ಯ ಕಾರಣ ಕೆಂಪೇಗೌಡರ ದೂರದೃಷ್ಠಿ ಎಂದು ಹೇಳಿದರು. ಶತಮಾನಗಳ ಹಿಂದೆಯೇ ಇಂತಹದೊಂದು ಅದ್ಭುತ ಸಾಧನೆಗೈದ ಆ ಮಹನೀಯರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಸದಾ ಸ್ಮರಣೀಯವಾಗಿರಲಿ ಎಂದು ಅಭಿಪ್ರಾಯಪಟ್ಟರು. ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಸಂತೋಷ್ ಬೋಳಿಯಾರ್, ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ ಶ್ರೀನಾಥ್, ಒಕ್ಕಲಿಗ ಯಾನೆ ಗೌಡರ ಸೇವಾ ಸಂಘದ ಮಂಗಳೂರಿನ ಅಧ್ಯಕ್ಷ ಸದಾನಂದ ಗೌಡ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ರಾಷ್ಟ್ರಮಟ್ಟದ ತರಬೇತುದಾರರೂ ಆಗಿರುವ ಶಿಕ್ಷಕ ರಾಜೇಂದ್ರ ಭಟ್ ಕೆ. ನಾಡಪ್ರಭು ಕೆಂಪೇಗೌಡ ಜಯಂತಿಯ ಸಂದೇಶ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿದರು.

Also Read  ಕಡಬ: ಯುವತಿ ನಾಪತ್ತೆ- ದೂರು ದಾಖಲು

 

error: Content is protected !!
Scroll to Top