(ನ್ಯೂಸ್ ಕಡಬ) newskadaba.com ಉಡುಪಿ, ಮೇ.06. ರಾಜ್ಯದ ಮೊದಲ ತೇಲುವ ಸೇತುವೆಯು ಶುಕ್ರವಾರದಂದು ಉಡುಪಿಯ ಮಲ್ಪೆ ಬೀಚ್‌ನಲ್ಲಿ ಲೋಕಾರ್ಪಣೆಗೊಂಡಿತು.
ಉಡುಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿಸಲು ಸೇತುವೆ ಆಕರ್ಷಣೆಯಾಗಲಿದ್ದು, ಸ್ಥಳೀಯ ಮೂವರು ಉದ್ಯಮಿಗಳು ಸೇರಿ 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಸೇತುವೆಯು 100 ಮೀಟರ್ ಉದ್ದ ಹಾಗೂ 3.5 ಮೀಟರ್ ಅಗಲವಿದೆ. ಪ್ರವಾಸಿಗರು ತಲಾ 100 ರೂ. ಪಾವತಿಸಿ 15 ನಿಮಿಷಗಳ ಕಾಲ ಸೇತುವೆಯ ಮೇಲೆ ನಡೆಯಬಹುದಾಗಿದೆ. ಲೈಫ್ ಜಾಕೆಟ್ ಕಡ್ಡಾಯಗೊಳಿಸಲಾಗಿದ್ದು, ಪ್ರವಾಸಿಗರ ಸುರಕ್ಷತೆಗಾಗಿ ಸೇತುವೆಯ ಮೇಲೆ 10 ಲೈಫ್ ಗಾರ್ಡ್‌ಗಳು ಮತ್ತು 30 ಲೈಫ್‌ಬಾಯ್ ರಿಂಗ್‌ಗಳು ಇರುತ್ತವೆ. ಸೇತುವೆಯ ಮೇಲೆ ಸಮುದ್ರದ ಅಲೆಗಳ ಚಲನೆಯನ್ನು ಅನುಭವಿಸುವುದರ ಜೊತೆಗೆ ಅಲೆಗಳ ಮೇಲೆ ನಡೆಯುವ ಮೂಲಕ ಆನಂದಿಸಬಹುದಾಗಿದೆ. ಪ್ರಾಯೋಗಿಕವಾಗಿ 15 ದಿನಗಳ ಕಾಲ ಈ ಸೇತುವೆಯಲ್ಲಿ ಪ್ರವಾಸಿಗರು ಚಲಿಸಬಹುದಾಗಿದ್ದು, ತದನಂತರ ಮಳೆಗಾಲ ಕಳೆದ ಬಳಿಕ ಮುಂದುವರಿಯಲಿದೆ.