ಹಿಜಾಬ್ ವಿರುದ್ಧ ಹೈಕೋರ್ಟ್ ನ ಅನ್ಯಾಯದ ತೀರ್ಪು ಸಂವಿಧಾನದ ಮೌಲ್ಯಗಳ ಮೇಲಿನ ದಾಳಿ ➤ ಪಾಪ್ಯುಲರ್ ಫ್ರಂಟ್

(ನ್ಯೂಸ್ ಕಡಬ) newskadaba.com ಮಾ. 16. ಕಾಲೇಜು ವಿದ್ಯಾರ್ಥಿನಿಯರಿಗೆ ಹಿಜಾಬ್ ನಿರಾಕರಿಸಿ ಹೈಕೋರ್ಟ್ ನೀಡಿರುವ ಅನ್ಯಾಯದ ತೀರ್ಪು ಸಂವಿಧಾನದ ಮೌಲ್ಯಗಳ ಮೇಲಿನ ದಾಳಿಯಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಹೇಳಿದ್ದಾರೆ.

ಒಂದೆಡೆ, ಹಿಜಾಬ್ ಮುಸ್ಲಿಮ್ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ಹೇಳುವ ಮೂಲಕ ಹೈಕೋರ್ಟ್ ಮುಸ್ಲಿಮರ ವೈಯಕ್ತಿಕ ಕಾನೂನಿನಲ್ಲಿ ಹಸ್ತಕ್ಷೇಪ ನಡೆಸಿದೆ. ಮತ್ತೊಂದೆಡೆ, ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ವ್ಯಕ್ತಿಯ ಆಯ್ಕೆಯ ಸ್ವಾತಂತ್ರ್ಯವನ್ನೂ ಅದು ಕಡೆಗಣಿಸಿದೆ. ಬಿಜೆಪಿ ತನ್ನ ರಾಜಕೀಯ ಲಾಭಕ್ಕೋಸ್ಕರ ಮುಸ್ಲಿಮ್ ವಿದ್ಯಾರ್ಥಿನಿಯರ ತಲೆವಸ್ತ್ರವನ್ನು ವಿವಾದಕ್ಕೊಳಪಡಿಸಿ ಅಶಾಂತಿ ಸೃಷ್ಟಿಸಿದಾಗ ಗೌರವಾನ್ವಿತ ಹೈಕೋರ್ಟ್, ಧಾರ್ಮಿಕ ಮತ್ತು ಆಯ್ಕೆಯ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲಿದೆ ಎಂಬ ಆಶಾವಾದ ಸಂವಿಧಾನ ಪ್ರೇಮಿಗಳದ್ದಾಗಿತ್ತು. ಆದರೆ ನ್ಯಾಯಾಂಗವು ಇದೀಗ ಅನ್ಯಾಯದ ತೀರ್ಪನ್ನು ನೀಡುವ ಮೂಲಕ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಇಂತಹ ರಾಜಕೀಯ ಪ್ರೇರಿತವಾದ ತೀರ್ಪುಗಳಿಂದ ಜನರು ನ್ಯಾಯದ ಮೇಲಿನ ಭರವಸೆಯನ್ನು ಕಳೆದುಕೊಳ್ಳುವ ಅಪಾಯವಿದೆ. ಹಿಜಾಬ್ ನಿಷೇಧದ ಕುರಿತಾದ ವಿಚಾರ 6 ವಿದ್ಯಾರ್ಥಿನಿಯರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಬದಲಾಗಿ ಅದು ಧಾರ್ಮಿಕ ಆಚರಣೆಯನ್ನು ಪಾಲಿಸುತ್ತಾ ಬಂದಿರುವ ಎಲ್ಲಾ ವಿದ್ಯಾರ್ಥಿನಿಯರಿಗೂ ಅನ್ವಯಿಸುವಂತದ್ದು. ಮುಸ್ಲಿಮ್ ಸಮುದಾಯದ ಶಿಕ್ಷಣದಲ್ಲಿನ ಹಿಂದುಳಿಯುವಿಕೆಯ ಬಗ್ಗೆ ಸಾಚಾರ್, ರಂಗನಾಥ್ ಮಿಶ್ರಾ ಆಯೋಗದಂತಹ ಹಲವಾರು ವರದಿಗಳು ಬೊಟ್ಟು ಮಾಡಿದ್ದವು. ಇದೇ ವೇಳೆ ಮುಸ್ಲಿಮ್ ಹುಡುಗಿಯರ ಶೈಕ್ಷಣಿಕ ರಂಗದಲ್ಲಿನ ಸಾಧನೆಗಳು ನಿರೀಕ್ಷೆಯನ್ನು ಮೂಡಿಸಿತ್ತು. ಆದರೆ ಇದೀಗ ಹೈಕೋರ್ಟ್ ಈ ತೀರ್ಪಿನಿಂದಾಗಿ ಮುಸ್ಲಿಮ್ ವಿದ್ಯಾರ್ಥಿನಿಯರು ತಮ್ಮ ಶಿಕ್ಷಣದ ಮೂಲಭೂತ ಹಕ್ಕಿನಿಂದ ವಂಚಿತರಾಗುವ ಸನ್ನಿವೇಶ ಎದುರಾಗಿದೆ. ಒಂದರ್ಥದಲ್ಲಿ ಮುಸ್ಲಿಮರನ್ನು ಅವಕಾಶ ವಂಚಿತರನ್ನಾಗಿಸಿ ದ್ವಿತೀಯ ದರ್ಜೆಯ ಪ್ರಜೆಗಳನ್ನಾಗಿ ಮಾಡುವ ಸಂಘಪರಿವಾರದ ಕಾರ್ಯಸೂಚಿಯೂ ಸಫಲವಾದಂತೆ ಕಾಣುತ್ತಿದೆ.

Also Read  ಇಂದು (ಜ.12) ಗೃಹ ಸಚಿವ ರಾಮಲಿಂಗಾ ರೆಡ್ಡಿ ದಕ್ಷಿಣ ಕನ್ನಡಕ್ಕೆ ► ದೀಪಕ್, ಬಶೀರ್ ನಿವಾಸಕ್ಕೆ ಭೇಟಿ ನೀಡಲಿರುವ ಸಚಿವರು

ನ್ಯಾಯಾಂಗ ವ್ಯವಸ್ಥೆಯು ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಕಾರ್ಯಾಚರಿಸಿದರೆ ಮಾತ್ರ ಬಹುಸಂಸ್ಕೃತಿಯ ಈ ದೇಶದಲ್ಲಿ ನಿರ್ದಿಷ್ಟ ಸಮುದಾಯದ ಸಂಸ್ಕೃತಿ, ಅಸ್ಮಿತೆಗಳನ್ನು ಕಾಪಾಡಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಸಂವಿಧಾನಕ್ಕೆ ವಿರುದ್ಧವಾದ ಈ ತೀರ್ಪನ್ನು ಕೋರ್ಟ್ ಪುನರ್ ಪರಿಶೀಲನೆ ನಡೆಸಬೇಕು ಹಾಗೂ ಅಲ್ಪಸಂಖ್ಯಾತರ ಹಕ್ಕುಗಳನ್ನು ಎತ್ತಿ ಹಿಡಿಯಬೇಕೆಂದು ಯಾಸಿರ್ ಹಸನ್ ಒತ್ತಾಯಿಸಿದ್ದಾರೆ.

Also Read  ಮಂಗಳೂರು ಏರ್ಪೋರ್ಟ್ ಗೆ ಬಂದಿಳಿದ ಕೇರಳದ ಪ್ರಯಾಣಿಕನಲ್ಲಿ ಮಂಕಿಫಾಕ್ಸ್ ಪತ್ತೆ ➤ 35 ಮಂದಿಗೆ ಐಸೋಲೇಷನ್..!!

error: Content is protected !!
Scroll to Top