ಪಾಸ್‌ಪೋರ್ಟ್ ಕಳೆದುಕೊಂಡು ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ ಮಂಗಳೂರಿನ ವಿದ್ಯಾರ್ಥಿನಿ..! ➤ ಸಹಾಯಕ್ಕಾಗಿ ಮೊರೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 02. ದ.ಕ ಜಿಲ್ಲೆಯ ಹದಿನೆಂಟು ಮಂದಿ ಉಕ್ರೇನ್ ನಲ್ಲಿ ಸಿಲುಕಿರುವ ಮಾಹಿತಿ ದೊರೆತಿದ್ದು, ಅದರಲ್ಲಿ ಕೆಲವರು ಬಸ್ ಹಾಗೂ ರೈಲಿನ ಮೂಲಕ ಉಕ್ರೇನ್ ತೊರೆದು ಮಾಲ್ಡೋವಾ, ಹಂಗೇರಿ ಮೊದಲಾದೆಡೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ.


ರಷ್ಯಾ ದಾಳಿಗೆ ತತ್ತರಿಸಿದ ಉಕ್ರೇನ್ ನ ಖಾರ್ಕಿವ್ ಪ್ರದೇಶದಲ್ಲಿದ್ದ ಮಂಗಳೂರಿನ ದೇರಬೈಲು ಅನೈನಾ ಅನ್ನಾ ಅವರು ಮಂಗಳವಾರದಂದು ರೈಲಿನ ಮೂಲಕ ಪೋಲಂಡ್ ಕಡೆಗೆ ಪ್ರಯಾಣಿಸಿದ್ದು, ಆಕೆಯ ಪಾಸ್ ಪೋರ್ಟ್ ಏಜೆಂಟ್ ಬಳಿ ಇದ್ದುದರಿಂದ ಇನ್ನಷ್ಟು ತೊಂದರೆಗೆ ಸಿಲುಕಿರುವುದಾಗಿ ಪ್ರಧಾನಿಗೆ ಟ್ವೀಟ್ ಮೂಲಕ ತಿಳಿಸಿದ್ದಾರೆ. “ನಮ್ಮ ಯುನಿವರ್ಸಿಟಿ ಕಟ್ಟಡದ ಪಕ್ಕದ ಕಟ್ಟಡವನ್ನು ಮಂಗಳವಾರ ಸ್ಫೋಟಿಸಲಾಗಿದ್ದು, ಹಾಗಾಗಿ ಬಂಕರ್ ಬಿಟ್ಟು ರೈಲು ಹತ್ತಿದ್ದೇನೆ. ಆದರೆ ನನ್ನ ಪಾಸ್‌ಪೋರ್ಟ್‌ ಏಜೆಂಟ್ ಬಳಿಯುದ್ದು, ಕರೆ ಮಾಡಿದರೆ ಅವರು ಇರುವ ಜಾಗಕ್ಕೆ ತೆರಳಿ ಪಡೆಯುವಂತೆ ಹೇಳುತ್ತಿದ್ದಾರೆ. ಆದರೆ ನಾನಿರುವ ಪ್ರದೇಶದ ಸುತ್ತಲೂ ದಾಳಿ ನಡೆಯುತ್ತಿದ್ದು, ಹೋಗಲು ಅಸಾಧ್ಯವಾಗಿದೆ. ಇದೀಗ ದಿಕ್ಕು ತೋಚದೇ ರೈಲಿನಲ್ಲಿ ಹೊರಟಿದ್ದೇನೆ. ನನಗೆ ಸಹಾಯ ಮಾಡಿ ಎಂದು ಅನೈನಾ ತಿಳಿಸಿದ್ದಾರೆ.

Also Read  ಕಡಬದ 108 ಆಂಬ್ಯುಲೆನ್ಸ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಗರ್ಭಿಣಿ

ಝಪೊರಿಯಾದಲ್ಲಿ ವಾಸವಿದ್ದ ಮಂಗಳೂರು ಬಿಕರ್ನಕಟ್ಟೆ ಪೃಥ್ವಿರಾಜ್‌ ರವಿವಾರದಂದು ರೈಲಿನಲ್ಲಿ ಸ್ಲೊವಾಕಿಯಾಕ್ಕೆ ಪ್ರಯಾಣ ಬೆಳೆಸಿದ್ದು, ಇನ್ನೂ ಅಲ್ಲಿಗೆ ತಲುಪಿರುವ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಪೃಥ್ವಿರಾಜ್ ಮತ್ತು ನಾವು ರೈಲಿನಲ್ಲೇ ಇದ್ದೇವೆ ಎಂದು ಸಹಪಾಠಿಯೋರ್ವ ಇನ್ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ಆದರೆ ರೈಲನ್ನು ಮಿಲಿಟರಿಗಳು ಸ್ಲೊವಾಕಿಯಾದಲ್ಲಿ ತಡೆದಿರುವ ಕುರಿತು ಸುದ್ದಿ ಕೇಳಿಬರುತ್ತಿದೆ ಎಂದು ಪೃಥ್ವಿರಾಜ್ ಕುಟುಂಬದವರು ತಿಳಿಸಿದ್ದಾರೆ. ಮಂಗಳೂರಿನ ಸಾಕ್ಷಿ ಸುಧಾಕರ್ ಉಕ್ರೇನ್ ನಿಂದ ಮಾಲ್ಡಿವ್ ಗೆ ಬಸ್ ನಲ್ಲಿ ಹೊರಟಿದ್ದು, ಕ್ಲೇಟನ್ ಮತ್ತು ಅನ್ಶಿತಾ ಅವರನ್ನು ಭಾರತೀಯ ರಾಯಭಾರಿ ಕಛೇರಿಯವರು ಗಡಿಯತ್ತ ಕರೆದೊಯ್ಯುತ್ತಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ.

 

ಈವರೆಗೆ ಉಕ್ರೇನ್ ನಲ್ಲಿ ದ.ಕ 18 ಮಂದಿ ಸಿಲುಕಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಇದರ ಪೈಕಿ 12 ಮಂದಿ ಹಾಗೂ ಅವರ ಕುಟುಂಬಿಕರು ಜಿಲ್ಲಾಡಳಿತದೊಂದಿಗೆ ಸಂಪರ್ಕದಲ್ಲಿದ್ದು, ಉಳಿದ ಆರು ಮಂದಿ ಸ್ಟೇಟ್ ಏಜೆನ್ಸಿ ಜೊತೆ ಸಂಪರ್ಕದಲ್ಲಿದ್ದಾರೆ. ಹಲವರು ರೈಲು ಹಾಗೂ ಬಸ್ ಮೂಲಕ ಗಡಿಯತ್ತ ಪ್ರಯಾಣ ಬೆಳೆಸಿದ್ದು, ಎಲ್ಲರನ್ನೂ ಭಾರತೀಯ ಕಛೇರಿಯೊಂದಿಗೆ ಸಂಪರ್ಕ ಹೊಂದಲು ಪ್ರಯತ್ನಿಸಲಾಗುತ್ತಿದೆ. ವಿದ್ಯಾರ್ಥಿಗಳ ಪೋಷಕರಿಗೆ ಧೈರ್ಯ ತುಂಬಲು ತಹಶೀಲ್ದಾರ್ ರನ್ನು ಕಳುಹಿಸಿಕೊಡಲಾಗಿದೆ. ಎಲ್ಲಾ ಪೋಷಕರೊಂದಿಗೆ ವರ್ಚುವಲ್ ಸಭೆ ನಡೆಸಿ ಧೈರ್ಯ ತುಂಬುವ ಕೆಲಸ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.

Also Read  ಸುಳ್ಯ: ತಂಡದಿಂದ ಯುವಕನ ಮೇಲೆ ಹಲ್ಲೆ

error: Content is protected !!
Scroll to Top