ದಶಕಗಳ ಕಾಲ ಸೇವೆಗೈದ ನಿವೃತ್ತ ಕೆಮ್ಮಾರ ಅಂಗನವಾಡಿ ಮೇಲ್ವಿಚಾರಕಿ ಮತ್ತು ಸಹಾಯಕಿ ಶಿಕ್ಷಕಿಗೆ ಸನ್ಮಾನ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಆತೂರು, ಫೆ. 15. ಕೆಮ್ಮಾರ ಅಂಗನವಾಡಿ ಕೇಂದ್ರದ ಶಿಕ್ಷಕಿಯಾಗಿ ಮತ್ತು ಮೇಲ್ವಿಚಾರಕರಾಗಿ ಮೂರು ದಶಕಗಳ ಕಾಲ ಸೇವೆಗೈದ ನಿವೃತ್ತ ಶಿಕ್ಷಕಿ ಹೇಮಾ ರಾಮದಾಸ್ ಮತ್ತು ಅಂಗನವಾಡಿ ಸಹಾಯ ಕಾರ್ಯಕರ್ತೆಯಾಗಿ ದುಡಿದ ಹಿರಿಯರಾದ ಲೀಲಾವತಿ ಅವರಿಗೆ ಕೆಮ್ಮಾರ ಅಂಗನವಾಡಿ ಕೇಂದ್ರದ ವತಿಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ತೇಜಾವತಿ ವಹಿಸಿದ್ದರು. ಶ್ರೀಮತಿ ಸುಜಾತರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಪ್ರಸಕ್ತ ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಉಮಾವತಿ ಮಾತನಾಡಿ ಕೆಮ್ಮಾರ ಅಂಗನವಾಡಿ ಕೇಂದ್ರವನ್ನು ರಾಜ್ಯಕ್ಕೆ ಗುರುತಿಸುವಂತೆ ಮಾಡಿದ್ದು ಮಾತ್ರವಲ್ಲದೇ ಮೂರು ದಶಕಗಳ ಕಾಲ ಸೇವೆಗೈದ ಹೇಮಾ ರಾಮದಾಸ್ ಮತ್ತು ಲೀಲಾವತಿಯವರನ್ನು ಗುರುತಿಸಿ ಸನ್ಮಾನಿಸಿದ್ದು ಶ್ಲಾಘನೀಯ ಕಾರ್ಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಊರ ನಾಗರಿಕರು ಅಂಗನವಾಡಿ ಪೋಷಕರು ಸಂದರ್ಭೋಚಿತವಾಗಿ ಮಾತನಾಡಿದರು. ಮಾಜಿ ಗ್ರಾಮ ಪಂಚಾಯತ್ ಸದಸ್ಯೆ ಸೀತಾ ಜೆಕೆ ರವರು ಸನ್ಮಾನಿತರ ಪರಿಚಯ ಮಾಡಿದರು. ಹಿರೇಬಂಡಾಡಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಹರಿನಾರಾಯಣ ಮತ್ತು ಹಾಲಿ ಸದಸ್ಯೆ ಶ್ರೀಮತಿ ವಾರಿಜಾಕ್ಷಿ, ಎಸ್‌ಡಿಎಂಸಿ ಜಿಲ್ಲಾ ಕಾರ್ಯದರ್ಶಿ ಸೆಲಿಕತ್ ಸೇರಿದಂತೆ ಹಲವರು ಸನ್ಮಾನ ಕಾರ್ಯವನ್ನು ನೆರವೇರಿಸಿದರು.

Also Read  ಮತ್ತೆ ಮುಳುಗಿದ 'ಹೊಸ್ಮಠ ಸೇತುವೆ'

 

ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಹೇಮಾ ರಾಮದಾಸ್ ನಿಸ್ವಾರ್ಥ ಸೇವೆ ಮಾಡಿದ್ದೇನೆ, ಮಕ್ಕಳ ಪೋಷಕರು ಮತ್ತು ಊರ ಹಿರಿಯರ ಸಹಕಾರದಿಂದ ಮತ್ತು ಸಹಾಯಕ ಶಿಕ್ಷಕಿಯ ಜೊತೆಗೂಡುವಿಕೆಯಿಂದ ನನ್ನ ಸೇವೆ ತೃಪ್ತಿ ತಂದಿದೆ, ಸನ್ಮಾನ ನಾನು ಬಯಸಿರಲಿಲ್ಲ ನಿಮ್ಮ ಪ್ರೀತಿಗೆ ಆಭಾರಿಯಾಗಿದ್ದೇನೆ ಎಂದರು. ಕಾರ್ಯಕ್ರಮದಲ್ಲಿ ಕೆಮ್ಮಾರ ಶಾಲಾಭಿವೃಧ್ದಿ ಸಮತಿ ಅಧ್ಯಕ್ಷರಾದ ಹಂಝ ಬಡ್ಡಮೆ ಮತ್ತು ಸಮಿತಿ ಸದಸ್ಯರು, ಚೇತನಾ ಗುಂಪಿನ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ, ದೀಪಾ ಗುಂಪಿನ ಅಧ್ಯಕ್ಷರಾದ ಹಾಝರಾ, ಬಾಲವಿಕಾಸ ಸಮಿತಿ ಸದಸ್ಯ ರವಿಕಾಂತ್, ಮಕ್ಕಳ ಪೋಷಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುನಿತಾರವರು ಸ್ವಾಗತಿಸಿದರು, ಅಂಗನವಾಡಿ ಕಾರ್ಯಕರ್ತೆ ಶುಭಾವತಿ ಕಾರ್ಯಕ್ರಮ ನಿರೂಪಿಸಿದರು ಮತ್ತು ಕೆಮ್ಮಾರ ಅಂಗನವಾಡಿ ಕಾರ್ಯಕರ್ತೆ ಸುಂದರಿ ಕೆ. ಧನ್ಯವಾದಗೈದರು.

Also Read  ಉಡುಪಿ: ಸರಕಾರಿ ಉದ್ಯೋಗದ ಹೆಸರಲ್ಲಿ ಆರೋಗ್ಯ ಸಹಾಯಕಿಗೆ ಲಕ್ಷಾಂತರ ರೂ. ವಂಚನೆ ➤ ಪ್ರಕರಣ ದಾಖಲು

error: Content is protected !!
Scroll to Top