(ನ್ಯೂಸ್ ಕಡಬ) newskadaba.com ಮಂಗಳೂರು, ಜ. 20. ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಭಟ್ಕಳಕ್ಕೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಗೆ ಕಾರು ಚಾಲಕನೋರ್ವ ಸುಮಾರು 30 ಕಿ.ಮೀ ತನಕ ದಾರಿ ಬಿಡದೇ ಸತಾಯಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮುಲ್ಕಿಯಿಂದ ಆಂಬ್ಯುಲೆನ್ಸ್ ಗೆ ಅಡ್ಡಬಂದ ಕೆಎ19 ಎಂಡಿ6843 ನೋಂದಣಿಯ ಚೆವರ್ಲೊ ಬೀಟ್ ಕಾರು ಉಡುಪಿ ನಗರದವರೆಗೂ ದಾರಿಕೊಡದೇ ಸತಾಯಿಸಿದ್ದನ್ನು ಆಂಬ್ಯುಲೆನ್ಸ್ ನಲ್ಲಿದ್ದವರು ಸೆರೆಹಿಡಿದಿದ್ದಾರೆ. ಅಲ್ಲದೇ ಪಾರ್ಕಿಂಗ್ ಲೈಟ್ ಹಾಕುತ್ತಾ ಮುಂದಿನಿಂದ ವೇಗವಾಗಿ ಸಂಚರಿಸುತ್ತಾ ಕಾರಿನಲ್ಲಿ ಅಡ್ಡಪಡಿಸುತ್ತಿದ್ದ ಯುವಕರಿಬ್ಬರು ಸುಮಾರು 30 ಕಿ.ಮೀ ವರೆಗೂ ಹುಚ್ಚಾಟ ತೋರಿದ್ದಲ್ಲದೇ ಕೈಸನ್ನೆ ಮಾಡುತ್ತಾ ವಿಚಿತ್ರವಾಗಿ ವರ್ತಿಸುತ್ತಿದ್ದರು ಎನ್ನಲಾಗಿದೆ.
ಹೀಗಾದರೂ ಆಂಬ್ಯುಲೆನ್ಸ್ ನಲ್ಲಿ ವೆಂಟಿಲೇಟರ್ ನಲ್ಲಿದ್ದ ರೋಗಿಯನ್ನು 1 ಗಂಟೆ 40 ನಿಮಿಷದಲ್ಲಿ ಭಟ್ಕಳಕ್ಕೆ ತಲುಪಿಸುವಲ್ಲಿ ಆಂಬ್ಯುಲೆನ್ಸ್ ಚಾಲಕ ಯಶಸ್ವಿಯಾಗಿದ್ದಾರೆ. ಈ ಘಟನೆ ನಡೆದ ಬೆನ್ನಲ್ಲೇ ಉಡುಪಿಯ ಇನ್ನೊಂದು ಖಾಸಗಿ ಆಂಬ್ಯುಲೆನ್ಸ್ ಚಾಲಕನಿಗೂ ಇದೇ ಕಾರು ಅಡ್ಡಿಪಡಿಸಿರುವುದಾಗಿ ಚಾಲಕ ಆರೋಪಿಸಿದ್ದಾರೆ. ಅಲ್ಲದೇ ಇಂತಹವರ ವಿರುದ್ದ ಸೂಕ್ತ ಕ್ರಮಕ್ಕೆ ಚಾಲಕರು ಒತ್ತಾಯಿಸಿದ್ದಾರೆ.