(ನ್ಯೂಸ್ ಕಡಬ) newskadaba.com ಪುತ್ತೂರು, ಜ. 17. ಶಿರಾಡಿ ಘಾಟಿಯಲ್ಲಿ ನಕಲಿ ಗೋಡಂಬಿ ಮಾರಾಟ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿರುವ ನಿಗೂಢ ಕೈಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪುತ್ತೂರಿನ ಗೋಡಂಬಿ ವ್ಯಾಪಾರಸ್ಥರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ವ್ಯಾಪಾರಸ್ಥರು, ದುಷ್ಟ ಶಕ್ತಿಗಳ ಅಪಪ್ರಚಾರದಿಂದ ವ್ಯಾಪಾರಕ್ಕೆ ಧಕ್ಕೆಯಾಗಿದ್ದು, ಸಮಾಜದ ಮುಂದೆ ತಲೆತಗ್ಗಿಸುವಂತಾಗಿದೆ. ನಾವು ಜಿಎಸ್ಟಿ ಪಾವತಿಸಿ ವ್ಯಾಪಾರ ಮಾಡುತ್ತಿದ್ದು, ಆಹಾರ ಇಲಾಖೆ ಸೇರಿದಂತೆ ಎಲ್ಲಾ ರೀತಿಯ ಸೂಕ್ತ ದಾಖಲೆಯನ್ನು ಇಟ್ಟುಕೊಂಡಿದ್ದು, ವಿಟ್ಲ ಹೆಸರಾಂತ ಗೋಡಂಬಿ ಕಾರ್ಖಾನೆ ವೆಂಕಟೇಶ್ವರ ಫ್ಯಾಕ್ಟರಿಯಿಂದ ರಖಂ ಆಗಿ ಖರೀದಿಸಿ, ಚಿಲ್ಲರೆ ಲಾಭಕ್ಕೆ ಮಾರಾಟ ಮಾಡುತ್ತಾ ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದೇವೆ. ಈಗ ಬೃಹತ್ ಗೋಡಂಬಿ ಮಾಫಿಯಾದ ಕೆಂಗಣ್ಣಿಗೆ ಗುರಿಯಾಗಿ ನಮ್ಮ ವಿರುದ್ದ ಷಡ್ಯಂತ್ರ ನಡೆಸಿ ಕಿರುಕುಳ ನೀಡುತ್ತಿದ್ದಾರೆ. ಈ ಕುರಿತು ಸಾರ್ವಜನಿಕರು ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೇ ಎಂದಿನಂತೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದೆ.