ಶಾಲಾ-ಕಾಲೇಜುಗಳ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಮಾಡುವವರ ವಿರುದ್ದ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 13. ಎಲ್ಲಾ ಶಾಲಾ-ಕಾಲೇಜುಗಳ ವ್ಯಾಪ್ತಿಯಲ್ಲಿ ತಂಬಾಕು ಮುಕ್ತ ಪ್ರದೇಶವೆಂದು ಘೋಷಣೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಬುಧವಾರದಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಂಬಾಕು ನಿಯಂತ್ರಣ ಕಾಯ್ದೆಯ ಅನುಸಾರ ಶಾಲಾ-ಕಾಲೇಜು ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳ 100 ಮೀಟರ್ ಅಂತರದಲ್ಲಿ ತಂಬಾಕು ಪದಾರ್ಥಗಳ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ, ಶಾಲಾ ಕಾಲೇಜುಗಳ ಬಳಿ ತಂಬಾಕು ಮುಕ್ತ ವಲಯ ಎಂದು ಫಲಕಗಳನ್ನು ಅಳವಡಿಸಬೇಕು ಹಾಗೂ ನಿಯಮ ಉಲಂಘಿಸುವವರಿಗೆ ದಂಡ ವಿಧಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮಕ್ಕಳು ದುಷ್ಚಟಕ್ಕೆ ಬಲಿಯಾಗಲು ಯಾವುದೇ ಕಾರಣಕ್ಕೂ ಅವಕಾಶ ಕಲ್ಪಿಸಿಕೊಡಬಾರದು, ಶಾಲಾ ಕಾಲೇಜು ಸುತ್ತಮುತ್ತಲಿನ ಪ್ರದೇಶದಲ್ಲಿ ತಂಬಾಕು ಮಾರಾಟವಾಗುತ್ತಿದ್ದರೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಯಾವುದೇ ಮುಲಾಜಿ ಇಲ್ಲದೇ ತಂಬಾಕು ಮಾರಾಟಗಾರರ ವಿರುದ್ದ ಕ್ರಮಕೈಗೊಳ್ಳುವಂತೆ ಅವರು ನಿರ್ದೇಶನ ನೀಡಿದರು.

Also Read  ತೊಕ್ಕೊಟ್ಟು: ಪೊಲೀಸರ ಸೂಚನೆಯಂತೆ ರಸ್ತೆ ಬದಿ ಲಾರಿಯನ್ನು ನಿಲ್ಲಿಸಿದ ಚಾಲಕ ► ನೋಡ ನೋಡುತ್ತಿದ್ದಂತೆಯೇ ನಡೆಯಿತು ಭೀಕರ ಘಟನೆ ► ಓರ್ವ ಮೃತ್ಯು - ಸ್ಥಳೀಯರಿಂದ ಪ್ರತಿಭಟನೆ


ಎಲ್ಲಾ ಸರ್ಕಾರಿ ಕಚೇರಿಗಳಲ್ಲಿಯೂ ಕೂಡಾ ತಂಬಾಕು ಉಪಯೋಗ ಅಥವಾ ಸೇವನೆಗೆ ಅವಕಾಶವಿಲ್ಲ, ಇದಕ್ಕೆ ಸಂಬಂಧಸಿದಂತೆ ಆಯಾ ಕಚೇರಿ ಮುಖ್ಯಸ್ಥರು ತಮ್ಮ ಕಛೇರಿ ಅಥವಾ ಕಟ್ಟಡಗಳನ್ನು ತಂಬಾಕು ಮುಕ್ತ ಎಂಬ ನಾಮ ಫಲಕ ಅಳವಡಿಸಲು ಕ್ರಮ ವಹಿಸುವಂತೆ ಹೇಳಿದರು. ಪ್ರತಿ ಗ್ರಾಮ ಪಂಚಾಯತ್ ಅಡಿಯಲ್ಲಿ ಒಂದು ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವನ್ನಾಗಿ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್‍ನ ಉಪ ಕಾರ್ಯದರ್ಶಿ (ಆಡಳಿತ) ರವರಿಗೆ ಸೂಚಿಸಲಾಗುವುದು ಮತ್ತು ಆಯಾ ಗ್ರಾಮ ಪಂಚಾಯತ್‍ನ ಪಿ.ಡಿ.ಒ ರವರು ಪ್ರತಿ ತಿಂಗಳು ಕೋಟ್ಪಾ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಬೇಕು ಎಂದು ತಿಳಿಸಿದರು. ಆಯಾ ತಾಲೂಕು ಮಟ್ಟದ ತನಿಖಾದಳದವರು ಕೋಟ್ಪಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸ್ಥಳೀಯ ಅಧಿಕಾರಿಗಳು ಉಲ್ಲಂಘನೆಯಾಗುತ್ತಿರುವ ಸ್ಥಳಗಳಲ್ಲಿ ಕೂಡಲೇ ಕಾರ್ಯಚರಣೆ ಮಾಡಲು ಸೂಚಿಸಿದರು.

Also Read  'ಪಿಎಂ ಕುಸುಮ್ ಯೋಜನೆ' ಕರ್ನಾಟಕದಿಂದಲೇ 1.79 ಲಕ್ಷ ರೈತರ ಬೇಡಿಕೆ               

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಡಾ. ಹನುಮಂತರಾಯಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಗದೀಶ್, ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಜಿಲ್ಲಾ ಹಾಗೂ ತಾಲೂಕು ಮಟ್ಟದ ಶಿಕ್ಷಣ, ಪೊಲೀಸ್, ಅಬಕಾರಿ, ಕಾರ್ಮಿಕ, ಸಾರಿಗೆ ಇಲಾಖೆ, ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

 

error: Content is protected !!
Scroll to Top