(ನ್ಯೂಸ್ ಕಡಬ) newskadaba.com ಉಳ್ಳಾಲ, ಜ. 12. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಕೊಣಾಜೆ ಗ್ರಾ.ಪಂ. ಅಧ್ಯಕ್ಷೆಗೆ ಅರೆಸ್ಟ್ ವಾರಂಟ್ ಜಾರಿಗೊಳಿಸಿದ ಬೆನ್ನಲ್ಲೇ ಕೊಣಾಜೆ ಗ್ರಾ.ಪಂ. ಅಧ್ಯಕ್ಷೆ ಚಂಚಲಾಕ್ಷಿ ತಲೆಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಚಂಚಲಾಕ್ಷಿ ಅವರು ಮಮತಾ ಶೈನಿ ಡಿಸೋಜಾ ಎಂಬವರಿಗೆ ಮೂರು ಲಕ್ಷ ರೂ.ಗಳ ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೊಪಿಯಾಗಿದ್ದು, ಇದೀಗ ತಲೆಮರೆಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ 2020ರ ಜ. 06ರಂದು ಕೇಸು ದಾಖಲಾಗಿದ್ದು, ಆ ಬಳಿಕ ಒಂಬತ್ತು ಬಾರಿ ವಾದ ವಿವಾದಗಳು ನಡೆದಿದ್ದು, ಇದೀಗ ನ್ಯಾಯಾಲಯ ಅರೆಸ್ಟ್ ಆದೇಶ ಹೊರಡಿಸಿದ ಬೆನ್ನಲ್ಲೇ ಅಧ್ಯಕ್ಷೆ ಚಂಚಲಾಕ್ಷಿ ತಲೆಮರೆಸಿಕೊಂಡಿದ್ದು, ಕೊಣಾಜೆ ಠಾಣಾ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಘಟನೆಯ ವಿವರ:
ಜ. 01, 2019ರಲ್ಲಿ ಮನೆಯಲ್ಲಿ ಕಷ್ಟ ಇದೆ. ಬ್ಯಾಂಕ್ ಸಾಲ ತೀರಿಸಲಾಗುತ್ತಿಲ್ಲ, ಮನೆ ಹರಾಜಿಗೆ ಬಂದಿದೆ, ಪತಿ ವಿದೇಶಕ್ಕೆ ಹೋಗುತ್ತಾರೆ. ಅದಕ್ಕಾಗಿ ಸಹಾಯ ಮಾಡಿ ಎಂದು ಚಂಚಲಾಕ್ಷಿ ಕೇಳಿಕೊಂಡಿದ್ದು, ಇದರಿಂದಾಗಿ ಮಮತಾ ಶೈನಿ ಡಿಸೋಜ ಅವರು ಒಂದೇ ಪಕ್ಷ ಹಾಗೂ ಗೆಳತಿ ಅಂದುಕೊಂಡು ಮೊದಲಿಗೆ 2.5 ರೂ ನೀಡಿ ಬಳಿಕ ಮತ್ತೆ ಐವತ್ತು ಸಾವಿರ ರೂ. ನೀಡಿದ್ದರು. ಕರಾರುಪತ್ರದಲ್ಲಿ ಮೂರು ತಿಂಗಳೊಳಗೆ ಹಣವನ್ನು ವಾಪಸ್ಸು ನೀಡುವುದಾಗಿ ಒಪ್ಪಿಕೊಂಡು ರೂ. ಮೂರು ಲಕ್ಷದ ಚೆಕ್ ಅನ್ನು ಪಡೆದುಕೊಂಡಿದ್ದರು. ಆದರೆ ಮೂರು ತಿಂಗಳು ಕಳೆದರೂ ಹಣ ನೀಡದೇ ಸತಾಯಿಸಿದ್ದರಿಂದ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದರು. ಅಲ್ಲಿ ಎರಡು ಸಲ ವಿಚಾರಣೆಗೆ ಹಾಜರಾಗಿದ್ದು, ಬಳಿಕ ನಡೆದ ಐದು ವಿಚಾರಣೆಗೆ ಹಾಜರಾಗದ ಹಿನ್ನೆಲೆ ನ್ಯಾಯಾಲಯವು ಜ. 7ರಂದು ಅರೆಸ್ಟ್ ವಾರಂಟ್ ಹೊರಡಿಸಿದ್ದರೂ ಪೊಲೀಸರು ಆರೋಪಿಯನ್ನು ಹಿಡಿದಿರಲಿಲ್ಲ. ಅದಕ್ಕಾಗಿ ಶೈನಿ ಡಿಸೋಜ ಅವರು ಪೊಲಿಸ್ ಆಯುಕ್ತರ ಕಛೇರಿಗೆ ತೆರಳಿ ಅಲ್ಲಿಂದ ಕೊಣಾಜೆ ಪೊಲೀಸರ ಜೊತೆಗೆ ಕೊಣಾಜೆ ಪಂಚಾಯತ್ ಹಾಗೂ ಚಂಚಲಾಕ್ಷಿ ಅವರ ಮನೆಗೆ ತೆರಳಿದ್ದರೂ, ಮನೆಗೆ ಬೀಗ ಹಾಕಲಾಗಿದ್ದು, ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿದ್ದು, ತಾನು ಪೊಲೀಸ್ ಠಾಣೆಗೆ ಎರಡು ದಿನಗಳಿಂದ ಅಲೆಯುತ್ತಿದ್ದೇನೆ ಎಂದಜ ಮಮತಾ ಶೈನಿ ತಿಳಿಸಿದ್ದಾರೆ.