(ನ್ಯೂಸ್ ಕಡಬ) newskadaba.com ಬಂಟ್ವಾಳ, ನ.07. ಸೋಮವಾರ ಶಾಲೆಗೆ ರಜೆ ಇದ್ದ ಕಾರಣ ಆಟ ಆಡಲೆಂದು ನದಿಗಿಳಿದಿದ್ದ ಐವರು ಮಕ್ಕಳು ನಾಪತ್ತೆಯಾಗಿದ್ದು ಓರ್ವ ಬಾಲಕನ ಮೃತದೇಹ ಪತ್ತೆಯಾದ ಘಟನೆ ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಮುಲಾರಪಟ್ನದಲ್ಲಿ ಎಂಬಲ್ಲಿ ಸೋಮವಾರದಂದು ನಡೆದಿದೆ.
ನಾಪತ್ತೆಯಾದವರನ್ನು ಮುಲಾರಪಟ್ನ ಶುಂಟಿಹಿತ್ಲು ನಿವಾಸಿಗಳಾದ ಆಶ್ರಪ್ ಎಂಬವರ ಪುತ್ರ ಪಿಯುಸಿ ವಿದ್ಯಾರ್ಥಿ ಅಸ್ಲಮ್ (೧೭), ಶರೀಫ್ ಎಂಬವರ ಪುತ್ರ ರಮೀಝ್(೧೭), ಹಂಝ ಎಂಬವರ ಪುತ್ರ ಅಜಮಾತ್(೧೮), ಶರೀಫ್ ಎಂಬವರ ಪುತ್ರ ಮುಬಶ್ಶಿರ್ (೧೭), ಮಹಮ್ಮದ್ ಎಂಬವರ ಪುತ್ರ ಸಮದ್(೧೭) ಎಂದು ಗುರುತಿಸಲಾಗಿದೆ.
ಕನಕ ಜಯಂತಿ ಪ್ರಯುಕ್ತ ಶಾಲೆಗೆ ರಜೆಯಿದ್ದ ಕಾರಣ
ಮಕ್ಕಳು ಒಟ್ಟು ಸೇರಿ ಮಧ್ಯಾಹ್ನದ ಬಳಿಕ ಫಲ್ಗುಣಿ ನದಿಯಲ್ಲಿ ಆಟ ಆಡಲು ತೆರಳಿದ್ದರೆನ್ನಲಾಗಿದೆ. ರಾತ್ರಿಯಾದರೂ ಮಕ್ಕಳು ಮನೆಗೆ ಬಾರದೆ ಇರುವಾಗ ಮನೆಯವರು ಗಾಬರಿಗೊಂಡು ಹುಡುಕಾಡಲು ಪ್ರಾರಂಭಿಸಿದ್ದಾರೆ. ಎಲ್ಲೂ ಪತ್ತೆಯಾಗದಿದ್ದಾಗ ಸೋಮವಾರ ರಾತ್ರಿಯಿಂದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕ ಪ್ರಸನ್ನ ನೇತೃತ್ವದಲ್ಲಿ ಫಲ್ಗುಣಿ ನದಿ ತಟದಲ್ಲಿ ಹುಡುಕಾಟ ಮುಂದುವರಿಸಲಾಗಿದ್ದು, ಓರ್ವನ ಮೃತದೇಹ ಮಂಗಳವಾರ ಬೆಳಿಗ್ಗೆ ನದಿಯಲ್ಲಿ ದೊರೆತಿದೆ.