(ನ್ಯೂಸ್ ಕಡಬ) newskadaba.com ಕಡಬ, ನ.06. ಕಳೆದ ಕೆಲವು ವರ್ಷಗಳಿಂದ ಸ್ವಚ್ಚತೆಗೆ ಹೆಸರುವಾಸಿಯಾಗಿದ್ದ ಕಡಬದಲ್ಲಿ ಇದೀಗ ಸ್ವಚ್ಚತೆ ಮರೀಚಿಕೆ ಆಗುವ ಸಾಧ್ಯತೆ ಕಾಣುತ್ತಿದ್ದು, ಸಂಜೆಯಾಗುತ್ತಿದ್ದಂತೆ ಕುಡುಕರು ರಸ್ತೆ ಬದಿ ಮದ್ಯ ಸೇವನೆ ಮಾಡುವುದಲ್ಲದೆ ಖಾಲಿ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದರ ಮೂಲಕ ಪೇಟೆಯ ಸ್ವಚ್ಚತೆಯನ್ನು ಹಾಳು ಮಾಡುತ್ತಿದ್ದಾರೆ.
ಈ ಬಗ್ಗೆ ಹಲವು ಬಾರಿ ಗ್ರಾ.ಪಂ. ಹಾಗೂ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಪೇಟೆಯ ಸ್ವಚ್ಛತೆಯನ್ನು ಹಾಳುಮಾಡುವುದಕ್ಕೆ ಉದಾಹರಣೆಯೆಂಬಂತೆ ಕಡಬ ಪಂಜ ರಸ್ತೆಯಲ್ಲಿರುವ ಯುವಕ ಮಂಡಲದ ಕಟ್ಟಡದ ಸುತ್ತ ಮದ್ಯದ ರಾಶಿ ಬಾಟಲಿಗಳು ಕಾಣ ಸಿಗುತ್ತದೆ. ಇಲ್ಲಿ ಸಂಜೆಯಾಗುತ್ತಲೆ ಮದ್ಯವ್ಯಸನಿಗಳು ಮದ್ಯ ಸೇವಿಸುತ್ತಾರೆ. ಇದೇ ಜಾಗದಿಂದ ಮಾಲೇಶ್ವರ ಪೊರಂತ್, ಪೆರಿಯಡ್ಕ ಭಾಗಗಳಿಗೆ ಸಂಪರ್ಕ ಇರುವ ಕಾಲು ದಾರಿಯು ಇದ್ದು ನೂರಾರು ಮಂದಿ ದಿನನಿತ್ಯ ನಡೆದುಕೊಂಡು ಹೋಗುತ್ತಿದ್ದು, ಆದರೆ ಇಲ್ಲಿ ಮದ್ಯವ್ಯಸನಿಗಳ ಕಾಟದಿಂದ ದಾರಿಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ತುಂಬಾ ಕಿರಿ ಕಿರಿಯಾಗುತ್ತಿದೆ. ಅದರಲ್ಲಿ ಶಾಲಾ ವಿದ್ಯಾರ್ಥಿನಿಯರು, ಮಹಿಳೆಯರಿಗೆ ಈ ಮದ್ಯವ್ಯಸನಿಗಳು ಕೀಟಲೆ ಮಾಡುವ ಬಗ್ಗೆಯೂ ಆರೋಪಗಳು ಕೇಳಿ ಬಂದಿದೆ.
ಯುವಕ ಮಂಡಲದ ಪರಿಸರದಲ್ಲಿ ಕಸ ಹಾಗೂ ಪೊದರುಗಳು ಬೆಳೆದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ಮನಗಂಡ ಮಾಲೇಶ್ವರದ ನವಜ್ಯೋತಿ ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯರು ಭಾನುವಾರದಂದು ಗಿಡಗಂಟಿಗಳನ್ನು ತೆಗೆದು ಪರಿಸರವನ್ನು ಸ್ವಚ್ಚಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಮದ್ಯದ ಬಾಟಲಿಗಳನ್ನು ರಾಶಿ ಹಾಕಿರುವುದು ಕಂಡು ಬಂದಿದೆ.
ಈ ಬಗ್ಗೆ ಕಡಬ ಗ್ರಾ.ಪಂ.ಗೆ ದೂರು ನೀಡಲಾಗಿದ್ದು, ಸ್ಥಳಕ್ಕೆ ಕಡಬ ಗ್ರಾ.ಪಂ. ಸದಸ್ಯ ಆದಂ ಕುಂಡೋಳಿ, ಬಿಜೆಪಿ ಮುಖಂಡ ಅಶೋಕ್ ಕುಮಾರ್ ಪಿ, ಮೊದಲಾದವರು ಭೇಟಿ ನೀಡಿದ್ದಾರೆ. ಸ್ವಚ್ಚತಾ ಕಾರ್ಯದಲ್ಲಿ ನವಜ್ಯೋತಿ ಸ್ಪೋರ್ಟ್ಸ್ ಕ್ಲಬ್‌ನ ಗೌರವಾಧ್ಯಕ್ಷ ಮೊದಿನ್, ಅಧ್ಯಕ್ಷ ಕಿಶನ್ ಕುಮಾರ್ ರೈ, ಉಪಾಧ್ಯಕ್ಷ ಅನಿಲ್ ಮಾಲೇಶ್ವರ, ಅಹ್ನದ್ ಕುಂಞ, ಸೋಮಯ್ಯ ದೇರೊಡಿ, ಹಂಝ ಯು.ಕೆ, ಮಹಾವೀರ ಜೈನ್ ಮಾಲೇಶ್ವರ, ಬಾಬು ದೇರೋಡಿ,ಜನಾರ್ದನ್ ಕುದುಂಬೂರು, ಅಬೂಬಕ್ಕರ್ ಕುಂಡೋಳಿ, ಸಂಜೀವ ನಾಕ್ ಕಲ್ಲಗಂಡಿ, ಶೇಖರ ಅರ್ಪಾಜೆ, ಜಗನ್ನಾಥ ಉದೇರಿ, ಸಿನಾನ್, ಇಬ್ರಾಹಿಂ ಪೊರಂತ್, ಇಬ್ರಾಹಿಂ, ದಿನೇಶ್ ದೆರೋಡಿ, ವರುಣ್ ದೇರೋಡಿ, ಸಿದ್ದೀಕ್ ಕುಂಡೋಳಿ,ರಂಗಪ್ಪ ದೇರೋಡಿ, ಜೋಸೆಫ್ ಮೊದಲಾದವರು ಪಾಲ್ಗೊಂಡಿದ್ದರು.