ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಜಿಲ್ಲಾಡಳಿತದಿಂದ ಮುಚ್ಚಳಿಕೆ ಬರೆಸಿಕೊಂಡ ವ್ಯಕ್ತಿ..!

(ನ್ಯೂಸ್ ಕಡಬ) newskadaba.com ಹುಬ್ಬಳ್ಳಿ, ನ. 29. ಕೊರೋನಾ ಲಸಿಕೆಯನ್ನು ಪಡೆಯಲು ಹಿಂಜರಿಯುತ್ತಿದ್ದ ವ್ಯಕ್ತಿಯೋರ್ವರು ಜಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ನಿಂದ ‘ಕೋವಿಡ್ ಲಸಿಕೆಯಿಂದ ಆರೋಗ್ಯದಲ್ಲಿ ಏನಾದರೂ ಸಮಸ್ಯೆಯಾದರೆ ನಾವೇ ಜವಾಬ್ದಾರಿ’ ಎಂದು ಮುಚ್ಚಳಿಕೆ ಬರೆಸಿಕೊಂಡು‌ ಲಸಿಕೆ ಪಡೆದುಕೊಂಡ ಅಪರೂಪದ ಘಟನೆ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರ ಸಭಾಭವನದಲ್ಲಿ ನಡೆದಿದೆ.

ಲಸಿಕೆ ಪಡೆಯುವ ವಿಚಾರವಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯೊಂದರಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಭಯವಾಗುತ್ತಿದೆ, ಅದನ್ನು ಸ್ವೀಕರಿಸಿ ಆರೋಗ್ಯದಲ್ಲಿ ಏರುಪೇರಾದರೆ ಯಾರು ಹೊಣೆ? ಎಂದು ಯಲ್ಲಾಪುರ ನಿವಾಸಿ ಆನಂದ ಕೊನ್ನೂರಕರ ಎಂಬವರು ಪ್ರಶ್ನಿಸಿದ್ದರು. ಕುಟುಂಬಿಕರು ಈಗಾಗಲೇ ಲಸಿಕೆ ಪಡೆದುಕೊಂಡಿದ್ದಾರೆ. ನಾನು ಲಸಿಕೆ ಪಡೆದುಕೊಂಡರೆ ನನಗೇನಾದರೂ ಹೆಚ್ಚು ಕಡಿಮೆಯಾದರೆ ಎಂಬ ಭಯ ಕಾಡುತ್ತಿದೆ. ಏನಾದರೂ ಆದರೆ ಕುಟುಂಬದ ಗತಿಯೇನು? ಆದ್ರಿಂದ ಜಿಲ್ಲಾಡಳಿತವೇ ಜವಾಬ್ದಾರಿ ವಹಿಸಿಕೊಳ್ಳುತ್ತದೆ ಎಂದು ಮುಚ್ಚಳಿಕೆ ಬರೆದುಕೊಡಬೇಕು ಎಂದು ಆಗ್ರಹಿಸಿದರು.

Also Read  ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲು..!

ಅವರ ಆತಂಕಕ್ಕೆ ಜಿಲ್ಲಾಧಿಕಾರಿ ಎಷ್ಟೇ ತಿಳಿಹೇಳುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್, ‘ಲಸಿಕೆಯಿಂದ ಅಡ್ಡ ಪರಿಣಾಮ ಉಂಟಾದರೆ ನಾವು ಜವಾಬ್ದಾರಿ ವಹಿಸಿಕೊಳ್ಳುತ್ತೇವೆ’ ಎಂದು ಮುಚ್ಚಳಿಕೆ ಬರೆದು ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ಉಪವಿಭಾಗಾಧಿಕಾರಿ ಸಹಿ ಹಾಕಿ ಆನಂದ ಕೊನ್ನೂರಕರಿಗೆ ನೀಡಿದರು. ಬಳಿಕ ಅಲ್ಲೇ ಲಸಿಕೆ ಹಾಕಿಸಿದ್ದಾರೆ.

error: Content is protected !!
Scroll to Top