(ನ್ಯೂಸ್ ಕಡಬ) newskadaba.com ಮಂಗಳೂರು, ನ. 22. ನಗರದ ಹೊರವಲಯದ ಸೋಮೇಶ್ವರ ಬೀಚ್ ತೀರದಲ್ಲಿ ಪ್ಲಾಸ್ಟಿಕ್ ಎಸೆದ ಪ್ರವಾಸಿ ಯುವತಿಯರಿಗೆ ಸೋಮೇಶ್ವರ ಪುರಸಭೆ ವತಿಯಿಂದ 500 ದಂಡ ವಿಧಿಸಿದ ಘಟನೆ ವರದಿಯಾಗಿದೆ.
ಸೋಮೇಶ್ವರ ಸಮುದ್ರ ತೀರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಸಮುದ್ರ ತೀರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವೂ ಹೆಚ್ಚಾಗಿ ಕಂಡುಬಂದಿದೆ. ಇದರಿಂದ ಸೋಮೇಶ್ವರ ಪುರಸಭೆಯು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳ ನೇತ್ರತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ 1 ಟನ್ ನಷ್ಟು ಪ್ಲಾಸ್ಟಿಕ್ ಸಂಗ್ರಹಿಸಿದ್ದರು. ಅಲ್ಲದೇ ಸ್ಥಳದಲ್ಲಿ ಇನ್ನು ಮುಂದೆ ಪ್ಲಾಸ್ಟಿಕ್ ಹಾಕದಂತೆ ಎಚ್ಚರಿಸಿ ನಾಮಫಲಕವನ್ನೂ ಹಾಕಲಾಗಿತ್ತು. ಆದರೂ ಇದನ್ನು ಕ್ಯಾರೇ ಅನ್ನದ ಪ್ರವಾಸಿ ಮಹಿಳೆಯರು ಪ್ಲಾಸ್ಟಿಕ್ ಹಾಕಿದ ಹಿನ್ನೆಲೆ ಪ್ರವಾಸಿಗರಿಗೆ 500 ರೂ. ದಂಡ ವಿಧಿಸಿ ಸ್ಥಳದಲ್ಲಿ ಕಾರ್ಯಾಚರಿಸುತ್ತಿರುವ ಅಂಗಡಿ ಮಾಲೀಕರಿಗೆ ನೋಟೀಸು ನೀಡಿದ್ದಾರೆ ಎನ್ನಲಾಗಿದೆ.