(ನ್ಯೂಸ್ ಕಡಬ) newskadaba.com ಸುಳ್ಯ, ನ. 16. ಮುಸ್ಲಿಂ ಯುವಕನೋರ್ವ ಹಿಂದೂ ಯುವತಿಯ ಬಳಿ ತಾನು ಹಿಂದೂ ಎಂದು ನಂಬಿಸಿ ಆಕೆಯನ್ನು ಬಲವಂತದಿಂದ ಮಡಿಕೇರಿಯ ಪಾರ್ಕ್ ಗೆ ಕರೆದೊಯ್ದು ಅಸಭ್ಯವಾಗಿ ವರ್ತಿಸಿ ಜೀವ ಬೆದರಿಕೆ ಒಡ್ಡಿರುವುದಲ್ಲದೇ ಜೊತೆಗಿರುವ ಫೋಟೋ ಹಿಡಿದು ವೈರಲ್ ಮಾಡುವುದಾಗಿ ಬ್ಲಾಕ್ ಮೇಲೆ ಮಾಡುತ್ತಿದ್ದಾನೆ ಎಂದು ಆರೋಪಿಸಿ ಯುವತಿಯು ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ತಸ್ಲಿಮ್ ಎಂದು ಗುರುತಿಸಲಾಗಿದೆ. ಮೂಲತಃ ಮಡಿಕೇರಿ ನಿವಾಸಿಯಾಗಿರುವ ಈತ ಎರಡು ತಿಂಗಳ ಹಿಂದೆ ಯುವತಿಗೆ ಸಾಮಾಜಿಕ ಜಾಲತಾಣದ ಮೂಲಕ ಕೌಶಲ್ ಎಂದು ಹೇಳಿ ಪರಿಚಯಿಸಿಕೊಂಡಿದ್ದ ಎಂದೆನ್ನಲಾಗಿದೆ. ನ. 11ರಂದು ಮಡಿಕೇರಿ ಪಾರ್ಕ್ ಗೆ ಬರುವಂತೆ ಯುವತಿಯನ್ನು ಒತ್ತಾಯಿಸಿದ್ದು, ಅದರಂತೆ ಆಕೆ ಆತನನ್ನು ಭೇಟಿಯಾಗಿದ್ದಳು. ಬಳಿಕ ಬೈಕಿನಲ್ಲಿ ಕೂರುವಂತೆ ಒತ್ತಾಯಿಸಿ, ಯುವತಿ ಆಕ್ಷೇಪಿಸಿದರೂ ಮಡಿಕೇರಿ ಕಡೆಗೆ ಬೈಕ್ ಚಲಾಯಿಸಿದ್ದಾನೆ. ನಂತರ ಪಾರ್ಕ್ ಹೋಗಿ ಅಸಭ್ಯವಾಗಿ ವರ್ತಿಸಿದಲ್ಲದೇ ಕೈ ಹಿಡಿದು ಮಾನಭಂಗಕ್ಕೆ ಯತ್ನಿಸಿದ್ದಾನೆ. ಯುವತಿಯು ವಿರೋಧಿಸಿದಾಗ ಆತ ಕೊಲ್ಲುವುದಾಗಿ ಬೆದರಿಸಿ, ನಾನು ಹಿಂದೂ ಅಲ್ಲ, ಮುಸ್ಲಿಂ. ನನ್ನ ಹೆಸರು ತಸ್ಲಿಂ. ನನ್ನನ್ನು ವಿರೋಧಿಸಿದರೆ ನಾವಿಬ್ಬರು ಜೊತೆಗಿರುವ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಆರೋಪಿಯನ್ನು ಬಂಧಿಸಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.