(ನ್ಯೂಸ್ ಕಡಬ) newskadaba.com ಮಂಗಳೂರು, ನ. 04. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸಹೋದರಿಯರಿಬ್ಬರ ವೀಡಿಯೋವನ್ನು ಮೊಬೈಲ್ ಮೂಲಕ ಚಿತ್ರೀಕರಿಸಿರುವ ಕಾಮುಕನೋರ್ವನನ್ನು ಪ್ರಯಾಣಿಕರೇ ಸೇರಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಜಪ್ಪಿನಮೊಗರುವಿನಲ್ಲಿ ನಡೆದಿದೆ.
ಆರೋಪಿ ಮಡಿಕೇರಿ ಮೂಲದ ಮಹಮ್ಮದ್ ಯೂಸುಫ್ ಎಂದು ಗುರುತಿಸಲಾಗಿದೆ. ಸಹೋದರಿಯರಿಬ್ಬರು ತಲಪಾಡಿಯಿಂದ ಮಂಗಳೂರು ಕಡೆಗೆ ಬಸ್ ನಲ್ಲಿ ತೆರಳುತ್ತಿದ್ದ ವೇಳೆ ಆರೋಪಿ ಯೂಸುಫ್ ತೊಕ್ಕೊಟ್ಟಿನಲ್ಲಿ ಬಸ್ ಹತ್ತಿದ್ದು, ಬಳಿಕ ಚಾಲಕನ ಹತ್ತಿರದ ಕ್ಯಾಬಿನ್ ಸೀಟಲ್ಲಿ ಕುಳಿತಿದ್ದ ಸಹೋದರಿಯರಿಬ್ಬರ ವೀಡಿಯೋವನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾನೆ. ಇದನ್ನು ಗಮನಿಸಿದ ಪ್ರಯಾಣಿಕನೋರ್ವ ಆರೋಪಿಯ ಕೃತ್ಯವನ್ನು ಸಹೋದರಿಯರ ಗಮನಕ್ಕೆ ತಂದಿದ್ದಾನೆ. ತಕ್ಷಣವೇ ವಿಷಯ ತಿಳಿದ ಇತರ ಪ್ರಯಾಣಿಕರು ಕಾಮುಕನನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡು, ಜಪ್ಪಿನಮೊಗರು ಎಂಬಲ್ಲಿ ಆತನನ್ನು ಬಸ್ ನಿಂದ ಇಳಿಸಿ ಥಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.