(ನ್ಯೂಸ್ ಕಡಬ) newskadaba.com ಸುಳ್ಯ, ಸೆ.24. ಇಲ್ಲಿನ ಬಸ್ ನಿಲ್ದಾಣದಲ್ಲಿ ನಿಂತಿದ್ದ ಖಜಾನಾಧಿಕಾರಿಯ ಜೇಬಿನಿಂದ ಮಂಗಳಮುಖಿಯೋರ್ವಳು ಒಂದೂವರೆ ಸಾವಿರ ಹಣವನ್ನು ಎಳೆದೊಯ್ದ ಘಟನೆ ನಡೆದ ಬಗ್ಗೆ ವರದಿಯಾಗಿದೆ.
ಬುಧವಾರ ರಾತ್ರಿ ಸುಳ್ಯದ ಖಜಾನಾಧಿಕಾರಿಯವರು ಪುತ್ತೂರಿಗೆ ಹೋಗಲೆಂದು ಸುಳ್ಯ ಬಸ್ ನಿಲ್ದಾಣದಲ್ಲಿದ್ದ ಬಸ್ ಹತ್ತಿ ಕುಳಿತಿದ್ದರು ಎನ್ನಲಾಗಿದೆ. ಈ ವೇಳೆ ಬಸ್ಸಿನೊಳಗೆ ಬಂದ ಮಂಗಳಮುಖಿಯೊಬ್ಬಾಕೆ ಹಣಕ್ಕಾಗಿ ಬೇಡಿಕೆಯಿಟ್ಟಿದ್ದು, ಖಜಾನಾಧಿಕಾರಿಯವರು ಹಣ ಕೊಡಲಿಲ್ಲವೆನ್ನಲಾಗಿದೆ. ಅಲ್ಲಿಂದ ಹೋದಂತೆ ನಟಿಸಿದ ಆಕೆ ಹಿಂತಿರುಗಿ ಬಂದು ಖಜಾನಾಧಿಕಾರಿಯವರ ಜೇಬಿಗೆ ಕೈ ಹಾಕಿ ಜೇಬಿನಲ್ಲಿದ್ದ ಒಂದೂವರೆ ಸಾವಿರ ರೂಪಾಯಿಗಳನ್ನು ಎಳೆದುಕೊಂಡಿದ್ದಾಳೆ ಎನ್ನಲಾಗಿದೆ. ತಕ್ಷಣವೇ ಅಧಿಕಾರಿಯು ಆಕೆಯ ಕೈಯನ್ನು ಹಿಡಿದುಕೊಂಡರಾದರೂ ಆಕೆ ತಪ್ಪಿಸಿಕೊಂಡು ಹಣದೊಂದಿಗೆ ಪರಾರಿಯಾಗಿದ್ದಾಳೆ ಎಂದು ತಿಳಿದುಬಂದಿದೆ.