(ನ್ಯೂಸ್ ಕಡಬ) newskadaba.com ಕಡಬ, ಸೆ.01. ಕೇಂದ್ರ ಮತ್ತು ರಾಜ್ಯ ಸರಕಾರವು ಕೋವಿಡ್ ಸಂಕಷ್ಟದ ಸಮಯದಲ್ಲಿ ಅಡುಗೆ ಅನಿಲ, ಪೆಟ್ರೋಲ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಎಸ್‌ಡಿಪಿಐ ಕಡಬ ಬ್ಲಾಕ್ ವತಿಯಿಂದ, ಕಡಬದ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸರಕಾರದ ಜನವಿರೋಧಿ ನೀತಿಯನ್ನು ವಿರೋಧಿಸಿ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಅಡುಗೆ ಅನಿಲದ ಸಿಲಿಂಡರ್ ಗಳ ಅಣುಕು ಶವಯಾತ್ರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ಎಸ್‌ಡಿಪಿಐ ರಾಜ್ಯ ಸಮಿತಿ ನಾಯಕರಾದ ಆನಂದ್ ಮಿತ್ತಬೈಲ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಜೆಡಿಎಸ್ ಕಡಬ ತಾಲೂಕು ಸಮಿತಿ ಅಧ್ಯಕ್ಷರಾದ ಸಯ್ಯದ್ ಮೀರಾನ್ ಸಾಹೇಬ್ ಮಾತನಾಡಿ ಜನವಿರೋಧಿ ಕಾನೂನುಗಳನ್ನು ತಂದು ಈಗಾಗಲೇ ರೈತರನ್ನು ಬೀದಿಗೆ ತಳ್ಳಿದ ಕೇಂದ್ರ ಸರಕಾರವು ಈಗ ಮೇಲಿಂದ ಮೇಲೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿ ಜನರನ್ನು ಬೀದಿಗೆ ತರಲು ನೋಡುತ್ತಿದೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಕಡಬ ತಾಲ್ಲೂಕು ಸಮಿತಿ ಅಧ್ಯಕ್ಷರಾದ ರಮ್ಲ ಸನ್ ರೈಸ್, ಸದಸ್ಯರಾದ ಕಮರುದ್ದೀನ್ ಅಲೆಕ್ಕಾಡಿ, ಹಾರಿಸ್ ಕಳಾರ, ಆಶಿಕ್ ಕಡಬ, ಅಬ್ಬಾಸ್ ಕಳಾರ ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು. ಎಸ್‌ಡಿಪಿಐ ಕಡಬ ಬೂತ್ ಸಮಿತಿ ಸದಸ್ಯ ಆಶಿಕ್ ಸ್ವಾಗತಿಸಿ, ಕಮರುದ್ದೀನ್ ವಂದಿಸಿದರು.