(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜು.31. ಸೊಪ್ಪು ತರಲೆಂದು ತೆರಳಿದ ಮಹಿಳೆಯೋರ್ವರು ನಾಪತ್ತೆಯಾಗಿರುವ ಘಟನೆ ಕಡಬ ತಾಲೂಕಿನ ರೆಖ್ಯಾ ಗ್ರಾಮದ ನೇಲ್ಯಡ್ಕ ಎಂಬಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ನಾಪತ್ತೆಯಾದ ಮಹಿಳೆಯನ್ನು ನೇಲ್ಯಡ್ಕ ಸಮೀಪದ ಉರ್ನಡ್ಕ ನಿವಾಸಿ ಸುಂದರ ಗೌಡ ಎಂಬವರ ಪತ್ನಿ ಶಕುಂತಲಾ ಎಂದು ಗುರುತಿಸಲಾಗಿದೆ. ಶಕುಂತಲಾ ಅವರು ಶನಿವಾರ ಬೆಳಿಗ್ಗೆ ಸೊಪ್ಪು ತರಲೆಂದು ಮನೆಯಿಂದ ತೆರಳಿದ್ದು, ಮನೆಯ ಪಕ್ಕದಲ್ಲಿ ಹರಿಯುವ ಗುಂಡ್ಯ ಹೊಳೆಯ ಸಮೀಪ ಅವರ ಚಪ್ಪಲಿ ದೊರೆತಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಅದಕ್ಕೂ ಮೊದಲು ಹಿರಿಯ ಮಗನಿಗೆ ಕರೆ ಮಾಡಿ ಕಿರಿಯ ಮಗನ ಮದುವೆಯ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದ್ದು, ಆ ನಂತರ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣಾ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಭೇಟಿ ನೀಡಿ ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.