(ನ್ಯೂಸ್ ಕಡಬ) newskadaba.com ಮಂಗಳೂರು, ಅ.27. ಮಾದಕ ವಸ್ತುಗಳಾದ ಎಲ್.ಎಸ್.ಡಿ., ಎಂ.ಡಿ.ಎಂ.ಎ., ಮತ್ತು ಎಂ.ಡಿ.ಎಂ. ಟ್ಯಾಬ್ಲೆಟ್ ಗಳನ್ನು ಮಾರಾಟ ಮಾಡುತ್ತಿದ್ದ, ಅಂತಾರಾಜ್ಯ ಜಾಲವನ್ನು ಭೇದಿಸಿರುವ ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳ ಅಧಿಕಾರಿ ಮತ್ತು ರೌಡಿ ನಿಗ್ರಹದಳದ ತಂಡ ಆರೋಪಿಗಳನ್ನು ಬಂಧಿಸಿದ ಘಟನೆ ಗುರುವಾರ ಸಮಜೆ ನಡೆದಿದೆ.
ಬಂಧಿತ ಆರೋಪಿಗಳನ್ನು ಕಾಸರಗೋಡು ಕಾಞಿಂಗಾಡ್ ರೈಲ್ವೆ ನಿಲ್ದಾಣ ಬಳಿಯ ನಿಖಿಲ್.ಕೆ.ಬಿ (24), ಕುಲಶೇಖರದ ಶ್ರವಣ ಪೂಜಾರಿ (23), ಕೇರಳ ಕಣ್ಣೂರಿನ ರೋಶನ್ ವೇಗಸ್ (22) ಮತ್ತು ಕೇರಳ ತ್ರಿಶೂರಿನ ಬಾಶಿಂ ಬಶೀರ್ (22) ಬಂಧಿತ ಆರೋಪಿಗಳು. ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹದಳದ ಸಹಾಯಕ ಪೊಲೀಸ್ ಆಯುಕ್ತರಿಗೆ ಮಂಗಳೂರು ನಗರದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿ ನಿಖಿಲ್ ನಗರದ ಎಂಜಿನಿಯರಿಂಗ್ ಕಾಲೇಜಿನಲ್ಲಿ 8ನೆ ಸೆಮಿಸ್ಟರ್ ಓದಿದ್ದು, 2 ವಿಷಯಗಳಲ್ಲಿ ಫೈಲ್ ಆಗಿರುತ್ತಾನೆ. ಆರೋಪಿ ಶ್ರವಣ್ ಪೂಜಾರಿ 2015ರಲ್ಲಿ ನಗರದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿ ಉತ್ತೀರ್ಣ ಆಗಿದ್ದಾನೆ. ಆರೋಪಿ ರೋಷನ್ ಸುರೇಶ್ , ಬಾಸಿಂ ಬಶೀರ್ ಇಬ್ಬರೂ ನಗರದ ವೈದ್ಯಕೀಯ ಕಾಲೇಜಿನಲ್ಲಿ 3ನೆ ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದಾರೆ.
ಬಂಧಿತರಿಂದ ಎಂ.ಡಿ.ಎಂ.ಎ. ಪೌಡರ್ 9.00 ಗ್ರಾಂ, ಎಲ್.ಎಸ್.ಡಿ ಸ್ಟಾಂಪ್ -185, ಎಂ.ಡಿ.ಎಂ. ಪಿಲ್ಸ್ (ಪಿಲ್ಸ್ 25), ಎಲೆಕ್ಟ್ರಾನಿಕ್ ತೂಕದ ಯಂತ್ರ -1, ಮೊಬೈಲ್ 4, ಮೋಟಾರ್‌ಸೈಕಲ್ (ಯಮಹಾ) -1, ಮೋಟಾರ್ ಸೈಕಲ್(ಬುಲೆಟ್)-1, ಹುಕ್ಕ 2, ಮಾದಕ ದ್ರವ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಓರ್ವ ಆರೋಪಿ ಮಾದಕ ದ್ರವ್ಯಗಳನ್ನು ತೂಕ ಮಾಡಿ ಕೊಡಲು ತೂಕದ ಯಂತ್ರವನ್ನು ಬಳಸುತ್ತಿದ್ದ. ಆರೋಪಿ ನಿಖಿಲ್ ಈ ಮಾದಕ ದ್ರವ್ಯವನ್ನು ಪಾರ್ಟಿ ಗಳಿಗೆ ಸರಬರಾಜು ಮಾಡುತ್ತಿರುವುದಾಗಿ ವಿಚಾರಣೆಯಿಂದ ತಿಳಿದು ಬಂದಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 5,30,500 ರೂ. ಎಂದು ಅಂದಾಜಿಸಲಾಗಿದೆ. ಈ ಪ್ರಕರಣದ ಜಾಲದಲ್ಲಿ ಇನ್ನೂ ಕೆಲವು ಪ್ರಮುಖ ಆರೋಪಿಗಳಿದ್ದು, ತನಿಖೆ ಮುಂದುವರಿದಿದೆ. ಮಂಗಳೂರು ನಗರದ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಅವರ ನಿರ್ದೇಶನದಂತೆ ಡಿಸಿಪಿ ಹನುಮಂತರಾಯ, ಡಿ.ಸಿ.ಪಿ. ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ರೌಡಿ ನಿಗ್ರಹ ದಳದ ಎ.ಸಿ.ಪಿ. ಅವರು ಮತ್ತು ಸಿಬ್ಬಂದಿಯವರಾದ ಎ.ಎಸ್.ಐ. ಸುಂದರ್ ಆಚಾರ್, ಎಚ್‌ಸಿಗಳಾದ ಮೋಹನ್ ಕೆವಿ, ಗಿರೀಶ್ ಬೆಂಗ್ರೆ, ರವಿನಾಥ್ ಮುಲ್ಕಿ, ಸುನೀಲ್ ಕುಮಾರ್, ರೆಜಿ ವಿ.ಎಂ, ರವಿಚಂದ್ರ ಪಡ್ರೆ, ದಾಮೋದರ ,ರಾಜರಾಮ್ ಕೂಟತ್ತಜೆ, ಮುಹಮ್ಮದ್ ಶರೀಫ್, ದಯಾನಂದ, ಸುಧೀರ್ ಶೆಟ್ಟಿ, ಮಹೇಶ್ ಕುಮಾರ್ ಮತ್ತು ಮುಹಮ್ಮದ್ ಇಕ್ಬಾಲ್ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.