(ನ್ಯೂಸ್ ಕಡಬ) newskadaba.com ಬೆಂಗಳೂರು, ಎ. 02. ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ಯುವತಿಯು ಪ್ರತ್ಯಕ್ಷವಾಗಿ ಹೇಳಿಕೆ ನೀಡಿದ ನಂತರ ಮಾಜಿ ಸಚಿವರಿಗೆ ಬಂಧನದ ಭೀತಿ ಶುರುವಾಗಿದ್ದು, ಈ ಕುರಿತ ವಿಚಾರಣೆಗೆ ಶುಕ್ರವಾರದಂದು ವಿಶೇಷ ತನಿಖಾ ತಂಡದ ಮುಂದೆ ವಿಚಾರಣೆಗೆ ಹಾಜರಾಗಬೇಕಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಆರೋಗ್ಯ ಸಮಸ್ಯೆಯ ನೆಪ ಹೇಳಿ ತಪ್ಪಿಸಿಕೊಂಡಿದ್ದಾರೆ.
ವಕೀಲರ ಮೂಲಕ ಮಾಹಿತಿ ನೀಡಿರುವ ರಮೇಶ್ ಜಾರಕಿಹೊಳಿ, ಆರೋಗ್ಯ ಸಮಸ್ಯೆಯಿದೆ ಎಂದು ಹೇಳಿ ಎರಡು ದಿನಗಳ ಕಾಲಾವಕಾಶ ಕೇಳಿದ್ದು, ಏ. 05 ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದ್ದಾರೆ. ಗುರುವಾರದಂದು ಸಂತ್ರಸ್ತ ಯುವತಿ ನೀಡಿದ ಹೇಳಿಕೆಯನ್ನಾಧರಿಸಿ ಇಂದು ಎಸ್‌ಐಟಿ ತಂಡವು ರಮೇಶ್ ಜಾರಕಿಹೊಳಿಯವರ ವಿಚಾರಣೆ ನಡೆಸಲು ನಿರ್ಧರಿಸಿತ್ತು. ಆದರೆ ರಮೇಶ್ ಜಾರಕಿಹೊಳಿ ಬಂದಿರಲಿಲ್ಲ. ನಂತರ ತಮ್ಮ ವಕೀಲರ ಮೂಲಕ ಆರೋಗ್ಯದಲ್ಲಿ ಸಮಸ್ಯೆಯಾಗಿದೆ ಎಂದು ತಿಳಿಸಿ ಎರಡು ದಿನಗಳ ಕಾಲಾವಕಾಶ ಕೇಳಿದ್ದಾರೆ. ಈ ಕುರಿತು ಜಾರಕಿಹೊಳಿ ಪರ ವಕೀಲರು, “ರಮೇಶ್ ಜಾರಕಿಹೊಳಿ ಗೋಕಾಕ್‌ನಲ್ಲೇ ಇದ್ದು, ಆರೋಗ್ಯ ಸರಿಯಿಲ್ಲದ ಕಾರಣ ಸಾರ್ವಜನಿಕ ವಲಯದಲ್ಲಿ ಕಂಡಿಲ್ಲ. ರಮೇಶ್ ಜಾರಕಿಹೊಳಿ ಅವರಿಗೆ ಯಾವುದೇ ಬಂಧನ ಭೀತಿ ಇಲ್ಲ” ಎಂದು ತಿಳಿಸಿದ್ದಾರೆ.