(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 29. ತಾನು ರಾಮಸೇನೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷನೆಂದು ಹೇಳಿಕೊಂಡು ಬಂದಿದ್ದಲ್ಲದೇ, ಮಂಗಳೂರು ವಿವಿಯಲ್ಲಿ ಕುಲಪತಿ ಸ್ಥಾನ ಕೊಡಿಸುತ್ತೇನೆಂದು ಹೇಳಿ ಭಾರೀ ಪ್ರಮಾಣದ ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತನನ್ನು ಪ್ರಸಾದ್ ಅತ್ತಾವರ ಎಂದು ಗುರುತಿಸಲಾಗಿದೆ. ಮಂಗಳೂರು ಅಥವಾ ರಾಯಚೂರು ವಿವಿಯಲ್ಲಿ ಕುಲಪತಿ ಸ್ಥಾನ ಕೊಡಿಸುವ ಆಮಿಷವೊಡ್ಡಿ 17.5 ಲಕ್ಷ ರೂ ಹಣವನ್ನು ಪಡೆದಿದ್ದ ಎಂದು ಪ್ರಸಾದ್ ವಿರುದ್ಧ ಮಂಗಳೂರು ವಿವಿಯಲ್ಲಿ ಕೆಮಿಸ್ಟ್ರಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ವಿವೇಕ್ ಆಚಾರ್ಯ ಎಂಬವರು ಈ ಬಗ್ಗೆ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದರು. ಈ ಕುರಿತು ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕುಲಪತಿ ಆಗಲು ಎಲ್ಲ ಅರ್ಹತೆಗಳನ್ನು ಹೊಂದಿದ್ದ ವಿವೇಕ್ ಆಚಾರ್ಯ ಅದಕ್ಕಾಗಿ ಲಾಬಿ ನಡೆಸಿದ್ದರು. ಈ ವೇಳೆ, ಪ್ರಸಾದ್ ತಾನು ಸಿಎಂ ಜೊತೆಗೆ ನಂಟು ಹೊಂದಿರುವುದಾಗಿ ಹೇಳಿ, 15 ಲಕ್ಷ ರೂ ಮತ್ತು ತನಗೆ ಅದಕ್ಕಾಗಿ ಓಡಾಡಲೆಂದು ಮತ್ತೆ ಎರಡೂವರೆ ಲಕ್ಷ ಹಣ ಪಡೆದಿದ್ದ. ಹಣ ಪಡೆದು ವರ್ಷದ ಮೇಲಾದ್ರೂ ಭರವಸೆ ಈಡೇರದ ಕಾರಣ ವಿವೇಕ್ ಆಚಾರ್ಯ ಠಾಣೆಗೆ ಈ ಕುರಿತು ದೂರು ನೀಡಿದ್ದರು.