(ನ್ಯೂಸ್ ಕಡಬ) newskadaba.com ಪುತ್ತೂರು, ಮಾ. 26. ಕಡಬ ತಾಲೂಕು ಶಿಕ್ಷಕರ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ ವತಿಯಿಂದ ಶಿಕ್ಷಕರ ಪ್ರಥಮ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನವು ಮಾ.27ರಂದು ಬೆಳಗ್ಗೆ 9 ರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಲಿದೆ ಎಂದು ಶಿಕ್ಷಕರ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಹರಿಕಿರಣ್ ಕೊಯಿಲ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತೆಗೆಯಲು ಪ್ರಪ್ರಥಮವಾಗಿ ಈ ಸಮ್ಮೇಳನ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಬೆಳಗ್ಗೆ 9.30 ಕ್ಕೆ ಇದರ ಮೆರವಣಿಗೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಉದ್ಘಾಟಿಸಲಿದ್ದು, ಸಚಿವ ಎಸ್.ಅಂಗಾರ ಸಮ್ಮೇಳನವನ್ನು ಉದ್ಘಾಟಿಸುವರು. ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಪುರಸ್ಕೃತ ಶಿಕ್ಷಕ ರಮೇಶ ಉಳಿಯ ಅಧ್ಯಕ್ಷತೆ ವಹಿಸುವರು. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಪರಿಷತ್ ಉದ್ಘಾಟಿಸುವರು. ಶಾಸಕ ಸಂಜೀವ ಮಠಂದೂರು ದೇಸಿ ವೈಭವ ಪುಸ್ತಕ ಬಿಡುಗಡೆ ಮಾಡುವರು. ಮಧ್ಯಾಹ್ನ 12 ಕ್ಕೆ ನಡೆಯುವ ಸಂಗೀತ ಸಮಯ ಪ್ರಥಮ ಸಾಂಸ್ಕೃತಿಕ ಗೋಷ್ಠಿಯಲ್ಲಿ ಶುಭರಾವ್ ಹಾಗೂ ಪವಿತ್ರಾ ರೂಪೇಶ್ ನಡೆಸಿಕೊಡುವರು. ಈ ಸಂದರ್ಭದಲ್ಲಿ ಶಿಕ್ಷಕರ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ ಸಂಚಾಲಕ ತಾರನಾಥ ಸವಣೂರು, ಕೋಶಾಧಿಕಾರಿ ಚರಣ್ ಕೆ.ಪುದು, ಸ್ವಾಗತ ಸಮಿತಿ ಉಪಾಧ್ಯಕ್ಷೆ ಯಶೋದ ಬೆಳ್ಳಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.