(ನ್ಯೂಸ್ ಕಡಬ) newskadaba.com ವಿಟ್ಲ, ಮಾ. 26. ಕರ್ತವ್ಯ ನಿರತರಾಗಿದ್ದ ವಿಟ್ಲ ಎಸ್.ಐ ವಿನೋದ್ ರೆಡ್ಡಿ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಲೆತ್ನಿಸಿದ ದುಷ್ಕರ್ಮಿಯನ್ನು ವಿಟ್ಲ ಪೋಲೀಸರು ಬಂಧಿಸಿದ ಘಟನೆ ವಿಟ್ಲ ಕೊಡಂಗೆ ಚೆಕ್ ಪೋಸ್ಟ್ ನಲ್ಲಿ ಇಂದು ಮುಂಜಾನೆ ನಡೆದಿದೆ.
ವಿಟ್ಲ ಸಮೀಪದ ಸಾಲೆತ್ತೂರು ಕೊಡಂಗೆ ಚೆಕ್ ಪೋಸ್ಟ್ ನಲ್ಲಿ ವಿಟ್ಲ ಎಸ್ಐ ವಿನೋದ್ ರೆಡ್ಡಿ ಹಾಗೂ ಸಿಬ್ಬಂದಿಗಳು ವಾಹನಗಳನ್ನು ತಡೆದು, ತಪಾಸಣೆ ನಡೆಸುತ್ತಿದ್ದ ವೇಳೆ ಬಿಳಿ ಬಣ್ಣದ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಯೊರ್ವ ಎಸ್ಐ ವಿನೋದ್ ರೆಡ್ಡಿ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಲೆತ್ನಿಸಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸಿಬ್ಬಂದಿಗಳು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಕೇರಳದಲ್ಲಿ ಗುಂಡಿನ ದಾಳಿ ನಡೆಸಿ ವಿಟ್ಲ ಮೂಲಕ ಪರಾರಿಯಾಗುತ್ತಿದ್ದಾನೆ ಎಂದು ವಿಟ್ಲ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ವಿಟ್ಲ ಎಸ್ಐ ನೇತೃತ್ವದ ತಂಡವು ಆರೋಪಿಗಳನ್ನು ತಡೆಯಲು ಮುಂದಾದ ಸಂದರ್ಭ ಅವರ ಮೇಲೆ ದಾಳಿಗೆ ಮುಂದಾಗಿದ್ದಾನೆ ಎನ್ನಲಾಗಿದೆ.